ಕಳಸದ ಕೆಳಬೈಲು ಗ್ರಾಮದಲ್ಲಿ ವಿದ್ಯುತ್ ತಂತಿ ಬಿದ್ದು ಮೂರು ಹಸುಗಳು ಸಾವನ್ನಪ್ಪಿರುವುದು
ಕಳಸ: ಕಳಸ ಕೆಳಬೈಲು ಎಂಬಲ್ಲಿ ಒಣಗಿದ ಮರ ವಿದ್ಯುತ್ ತಂತಿ ಮೇಲೆ ಬಿದ್ದು ತಂತಿ ತುಂಡಾಗಿ ಮರಳ ಕೆಳಗೆ ಮೇಯುತ್ತಿದ್ದ ಮೂರು ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ.
ರಸ್ತೆ ಪಕ್ಕದ ತೋಟದಲ್ಲಿದ್ದ ಒಣಗಿದ ಮರವೊಂದು ರಸ್ತೆ ಬದಿಯ 11 ಕೆ.ವಿ ವಿದ್ಯುತ್ ಮಾರ್ಗದ ಮೇಲೆ ಧರೆಗುರುಳಿದೆ. ಇದೇ ಸಂದರ್ಭದಲ್ಲಿ ತಂತಿ ಅಡಿ ಮೇಯುತ್ತಿದ್ದ ದನಗಳ ಮೇಲೆ ವಿದ್ಯುತ್ ತಂತಿ ಬಿದ್ದ ಪರಿಣಾಮ ಮೂರು ಹಸುಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿವೆ. ಜೊತೆಯಲ್ಲಿದ್ದ ಇತರ ದನಗಳು ಭಯದಿಂದ ದಿಕ್ಕಾಪಾಲಾಗಿ ಓಡಿವೆ.
ಇದೇ ವೇಳೆ ರಸ್ತೆಯಲ್ಲಿ ಲಾರಿಯೊಂದು ಸಂಚರಿಸುತ್ತಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ರಸ್ತೆ ಅಪಘಾತ ಮತ್ತು ಜೀವಹಾನಿ ತಪ್ಪಿದೆ. ನಿತ್ಯ ಈ ರಸ್ತೆಯಲ್ಲಿ ಶಾಲಾ ಮಕ್ಕಳು ಹಾಗೂ ಆಟೋಗಳು ಹೆಚ್ಚಾಗಿ ಸಂಚರಿಸುತ್ತವೆ. ಮೃತ ಹಸುಗಳು ಎಡದಾಳು ಗಿರೀಶ್ ಎಂಬುವವರಿಗೆ ಸೇರಿವೆ. ಇವು ಹಾಲು ನೀಡುವ ಹಸುಗಳಾಗಿದ್ದವು. ಹಸುಗಳ ಮಾಲೀಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ದನಗಳು ಪ್ರತಿದಿನ ಮನೆ ಬಾಗಿಲಿಗೆ ಬಂದು, ನಾವು ಕೊಟ್ಟ ತಿನಿಸುಗಳನ್ನು ತಿಂದು ಶಾಂತವಾಗಿ ಹೋಗುತ್ತಿದ್ದವು. ಯಾವುದೇ ತೊಂದರೆ ನೀಡದ ಈ ಅಮಾಯಕ ಜೀವಿಗಳು ಇಂದು ನಮ್ಮ ಕಣ್ಣೆದುರೇ ಮೃತಪಟ್ಟಿರುವುದು ತೀವ್ರ ಬೇಸರ ತಂದಿದೆ ಎಂದು ಗ್ರಾಮದ ನಿವಾಸಿ ಮಹಾವೀರ ತೀವ್ರ ಕಳವಳ ವ್ಯಕ್ತಪಡಿಸಿದರು.
ರಸ್ತೆ ಬದಿಯಲ್ಲಿ 11 ಕೆವಿ ಹೈ-ಟೆನ್ಷನ್ ವಿದ್ಯುತ್ ಲೈನ್ ಹಾದುಹೋಗಿದ್ದರೂ, ತೋಟದಲ್ಲಿದ್ದ ಒಣಗಿದ ಹಾಗೂ ಅಪಾಯಕಾರಿ ಮರಗಳ ಕಡಿತಲೆ ರೆಂಬೆ-ಕೊಂಬೆ ತೆರವು) ಮಾಡದಿರುವುದೇ ಈ ದುರಂತಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಳೆಗಾಲಕ್ಕೆ ಮುಂಚಿತವಾಗಿ ತೋಟದ ಒಳಗಿನ ಮರಗಳನ್ನು ತೆರವುಗೊಳಿಸಿದ ತೋಟದ ಮಾಲೀಕರು, ರಸ್ತೆ ಬದಿ ಅಪಾಯಕಾರಿ ಮರಗಳನ್ನು ಹಾಗೆಯೇ ಬಿಟ್ಟಿದ್ದಾರೆ.
ಮತ್ತೊಂದೆಡೆ, ಮೆಸ್ಕಾಂ ಇಲಾಖೆ ತೋಟದ ಮಾಲೀಕರಿಗೆ ಸೂಚನೆ ನೀಡಿ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಸಂಪೂರ್ಣ ನಿರ್ಲಕ್ಷ್ಯವಹಿಸಿದೆ. ಇವರಿಬ್ಬರ ಬೇಜವಾಬ್ದಾರಿತನದಿಂದ ಮೂರು ಮೂಕ ಪ್ರಾಣಿಗಳು ಬಲಿಯಾಗಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳಸ ಪೊಲೀಸ್ ಸಿಬ್ಬಂದಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಂದಾಯ ಇಲಾಖೆ ಅಧಿಕಾರಿಗಳು, ಮೆಸ್ಕಾಂ ಸಿಬ್ಬಂದಿ ಹಾಗೂ ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತ ರೈತನಿಗೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಹಾಗೂ ರಸ್ತೆ ಬದಿ ಅಪಾಯಕಾರಿ ಮರಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.