ಏಕಲವ್ಯ ಶಾಲೆಯ ಘಟನಾ ಸ್ಥಳಕ್ಕೆ ಡಿವೈಎಸ್ಪಿ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂಡಿಗೆರೆ: ಕೊಟ್ಟಿಗೆಹಾರದ ಏಕಲವ್ಯ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯಲ್ಲಿ 9 ನೇ ತರಗತಿ ವಿದ್ಯಾರ್ಥಿಯ ಬಲಗೈ ಮುರಿದಿದೆ. ಇನ್ನೊಬ್ಬ ವಿದ್ಯಾರ್ಥಿ ಕಿವಿ ಕೇಳಿಸುತ್ತಿಲ್ಲ. ಅದರೂ ಅಧಿಕಾರಿಗಳು ಮಾತ್ರ ಏನು ಆಗಿಲ್ಲ ದಂತೆ ವರ್ತಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಪಾಲಕರು ದೂರಿದ್ದಾರೆ.
ಗಾಯಗೊಂಡ ವಿದ್ಯಾರ್ಥಿಯನ್ನು ಭಾನುವಾರ ಖಾಸಗಿ ಆಸ್ಪತ್ರೆಗೆ ಎಕ್ಸರೆ ತೆಗೆಸಿ ನೋಡಿದಾಗ ಬಲಗೈ ಮುರಿದಿರುವುದು ತಿಳಿದುಬಂದಿದೆ. ಸೋಮವಾರದಿಂದ ಪರೀಕ್ಷೆ ಇರುವುದರಿಂದ ವಸತಿ ಶಾಲೆಗೆ ಅನಿವಾರ್ಯವಾಗಿ ಬಿಡಲಾಗಿದೆ. ವಿದ್ಯಾರ್ಥಿ ಕೈ ಮುರಿದುಹೋಗಿರುವುದರಿಂದ ಬೇರೆ ವಿದ್ಯಾರ್ಥಿಗಳ ಬಳಿ ಬರೆಸಲಾಗಿದೆ. 5 ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದೆ. ಪರೀಕ್ಷೆಯಿರುವ ಕಾರಣ ಏನು ಮಾಡುವಂತಿಲ್ಲ. ವಸತಿ ಶಾಲೆಯಲ್ಲಿ ನಮ್ಮ ಮಕ್ಕಳನ್ನು ಬಿಡಬೇಕಾಗಿದೆ ಎಂದು ಪಾಲಕರು ವಿಜಯವಾಣಿಗೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಮೇಲಿನ ಹಲ್ಲೆ ಕುರಿತು ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹಲ್ಲೆ ನಡೆಸಿದವರನ್ನು ಕೂಡಲೇ ಅಮಾನತುಪಡಿಸಿ ಬಂಧಿಸುವಂತೆ ಒತ್ತಾಯಿಸಿದರೂ ಸೋಮವಾರ ಸಂಜೆಯವರೆಗೂ ಅವರನ್ನು ಬಂಧಿಸಿಲ್ಲ. ಅಲ್ಲದೇ ಘಟನೆ ಖಂಡಿಸಿ ಶಾಲಾ ಅವರಣದಲ್ಲಿ ಪ್ರತಿಭಟನೆ ನಡೆಸಿ ನಾಲ್ಕೈದು ಸಂಘ-ಸಂಸ್ಥೆಯವರು ಪ್ರತ್ಯೇಕವಾಗಿ ಉಪ ವಿಭಾಗಾಧಿಕಾರಿ ನಟೇಶ್‌ಗೆ ಮನವಿ ಸಲ್ಲಿಸಿದರೂ ಇದುವರೆಗೂ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸೋಮವಾರ ಏಕಲವ್ಯ ಶಾಲೆಯ ಘಟನಾ ಸ್ಥಳಕ್ಕೆ ಡಿವೈಎಸ್ಪಿ ನಾಗರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಾತಿನಿಂದನೆ ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಅವರು ಸ್ಥಳ ಮಹಜರ್ ನಡೆಸಿದ್ದಾರೆ. ಡಿವೈಎಸ್ಪಿ ಅವರೊಂದಿಗೆ ದೂರುದಾರ ರಮೇಶ್ ನಾಯ್ಕ ಕೂಡ ಇದ್ದರು. ಏಕಲವ್ಯ ವಸತಿ ಶಾಲೆ ಪ್ರಾಚಾರ್ಯ ಸತೀಶ್ ಪ್ರಸಾದ್ ಜೈಸ್ವಾಲ್ ಅವರನ್ನು ಪ್ರಕರಣದ ವಿಚಾರಣೆಗಾಗಿ ಜಿಲ್ಲಾಧಿಕಾರಿ ನಾಗರಾಜ್ ಸೋಮವಾರ ಚಿಕ್ಕಮಗಳೂರಿಗೆ ಕರೆಸಿಕೊಂಡಿದ್ದಾರೆ.