ಬಾಳೆಹೊನ್ನೂರು ಸಮೀಪದ ಬನ್ನೂರಿನಲ್ಲಿ ಶಶಿಧರ್ ಕುಟುಂಬಸ್ಥರು ಓಣಂ ಹಬ್ಬದ ಅಂಗವಾಗಿ ಕುಟುಂಬಸ್ಥರೊಂದಿಗೆ ಸೇರಿ ಆಕರ್ಷಕ ಪೂಕಳಂ ರಚಿಸಿ ಸಂಭ್ರಮಿಸಿದರು.
ಬಾಳೆಹೊನ್ನೂರು: ಹೋಬಳಿಯಾದ್ಯಂತ ಕೇರಳಿಯನ್ನರು ಹಾಗೂ ಮಲೆಯಾಳಿ ಸಮಾಜದವರು ತಿರು ಓಣಂ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ಓಣಂ ಹಬ್ಬದ ಅಂಗವಾಗಿ ಎಂಟು ದಿನಗಳ ಮೊದಲೇ ಕೇರಳಿಯನ್ನರು ಮನೆಗಳ ಮುಂದೆ ಪ್ರತಿನಿತ್ಯ ವಿವಿಧ ಮಾದರಿಯ ಪೂಕಳಂ (ಹೂವಿನ ರಂಗೋಲಿ) ಬರೆದು ಹಬ್ಬವನ್ನು ಸ್ವಾಗತಿಸಿದರು. ಹೋಬಳಿ ವ್ಯಾಪ್ತಿಯ ಕೇರಳಿಯನ್ನರ ಮನೆಯಂಗಳದಲ್ಲಿ ಹಲವು ಬಗೆಯ ಪುಷ್ಪಗಳಿಂದ ರಚಿಸಿದ್ದ ವಿವಿಧ ಮಾದರಿ ಚಿತ್ತಾರದ ಆಕರ್ಷಕ ಭಾರೀ ಗಾತ್ರದ ಪೂಕಳಂಗಳು ನೋಡುಗರ ಗಮನ ಸೆಳೆಯುತ್ತಿದ್ದವು.
ಹೂವಿನ ಬೆಲೆ ಏರಿಕೆ ನಡುವೆಯೂ ವಿವಿಧ ಬಗೆಯ ಪುಷ್ಪಗಳಿಂದ ಕೇರಳದ ಸಾಂಪ್ರದಾಯಿಕ ಧರಿಸಿನೊಂದಿಗೆ ಆಕರ್ಷಕ ಹಾಗೂ ಬೃಹತ್ ಆಕಾರದ ಪೂಕಳಂಗಳನ್ನು ಮಲೆಯಾಳಿ ಮಹಿಳೆಯರು ಬರೆಯುತ್ತಿದ್ದ ದೃಶ್ಯ ಸಮಾನ್ಯವಾಗಿತ್ತು. ದೇವಾಲಯ ಹಾಗೂ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಮನೆಗಳಲ್ಲಿ ಕೇರಳದ ವಿಶೇಷ ಖಾದ್ಯಗಳನ್ನು ತಯಾರಿಸಿ ಅಕ್ಕಪಕ್ಕದವರಿಗೆ ಹಂಚಿ ಹಬ್ಬದ ಸಂಭ್ರಮ ಇಮ್ಮಡಿ ಮಾಡಿಕೊಂಡರು.