ಬಾಳೆಹೊನ್ನೂರು ಮಸೀದಿಕೆರೆಯ ಅಲ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ರಂಜಾನ್ ಅಂಗವಾಗಿ ಆಯೋಜಿಸಿದ್ದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು ಮತ್ತು ಗಣ್ಯರು ಭಾಗವಹಿಸಿದ್ದರು.
ಬಾಳೆಹೊನ್ನೂರು: ಜಗತ್ತಿನಲ್ಲಿ ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ದೊಡ್ಡದು. ಮಾನವ ಧರ್ಮಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಹುಡುಗಿ ಹಿರೇಮಠದ ಶ್ರೀ ಸೋಮೇಶ್ವರ ಶಿವಾಚಾರ್ಯರು ಹೇಳಿದರು.
ಮಸೀದಿಕೆರೆಯ ಅಲ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ರಂಜಾನ್ ಅಂಗವಾಗಿ ಆಯೋಜಿಸಿದ್ದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮಾತನಾಡಿ, ಧರ್ಮ, ಧರ್ಮಗಳ ನಡುವೆ ಸಂಘರ್ಷಗಳು ನಡೆಯುವ ಈ ಯುಗದಲ್ಲಿ ರಂಭಾಪುರಿ ಪೀಠದ ಲಿಂಗೈಕ್ಯ ಶ್ರೀ ವೀರಗಂಗಾಧರ ಜಗದ್ಗುರುಗಳು ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಶ್ರೇಷ್ಠ ಸಂದೇಶ ಸಾರಿದರು ಎಂದರು.
ಮಾನವ ಧರ್ಮ, ಮಾನವೀಯತೆಯು ಜೀವನದಲ್ಲಿದ್ದರೆ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಲು ಸಾಧ್ಯವಿದೆ. ಜಗತ್ತಿನಲ್ಲಿ ಸೂರ್ಯ ಚಂದ್ರರು, ಆಕಾಶ, ಭೂಮಿ ಹಾಗೂ ಪ್ರಕೃತಿ ಎಂದಿಗೂ ಬದಲಾಗಿಲ್ಲ. ಆದರೆ ಮನುಷ್ಯನ ಭಾವನೆಗಳು ಮಾತ್ರ ಬದಲಾಗಿ ಸಮಾಜದಲ್ಲಿ ವೈಮನಸ್ಸು ಬೆಳೆಯುತ್ತಿದೆ. ಆದರೆ ಮಾನವೀಯತೆ, ಮಾನವ ಧರ್ಮವನ್ನು ಎಲ್ಲರೂ ಅಳವಡಿಸಿಕೊಂಡು ಸಮಾಜದಲ್ಲಿ ಒಗ್ಗಟ್ಟಾಗಿ ಮುನ್ನಡೆಯಬೇಕಿದೆ ಎಂದು ಹೇಳಿದರು.
ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ ಮಾತನಾಡಿ, ಸಮಾಜದ ಎಲ್ಲ ಧರ್ಮಗಳು ಪರಸ್ಪರ ಶಾಂತಿ, ಸೌಹಾರ್ದದಿಂದ ಬದುಕಿದರೆ ಮಾತ್ರ ಸಾಮರಸ್ಯ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಆಲ್ ಬದ್ರಿಯಾ ಜುಮ್ಮಾ ಮಸೀದಿಯಿಂದ ಸೌಹಾರ್ದ ಇಫ್ತಾರ್ ಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಪಿಎಸ್‌ಐ ಅಂಬರೀಷ್ ಮಾತನಾಡಿ, ಹಿಂದು-ಮುಸಲ್ಮಾನರು ಒಗ್ಗೂಡಿ ಮಸೀದಿಕೆರೆಯಲ್ಲಿ ರಂಜಾನ್ ಅಂಗವಾಗಿ ಸೌಹಾರ್ದ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂತಹ ಸಾಮರಸ್ಯಗಳಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ನಮ್ಮ ಧರ್ಮವನ್ನು ಪ್ರೀತಿಸಿ ಬೆಳೆಸುವುದರೊಂದಿಗೆ, ಅನ್ಯ ಧರ್ಮವನ್ನು ಗೌರವದಿಂದ ಕಾಣುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಆಲ್ ಬದ್ರಿಯಾ ಜುಮ್ಮಾ ಮಸೀದಿ ಸಮಿತಿ ಅಧ್ಯಕ್ಷ ಟಿ.ಎಂ.ನಾಸಿರ್, ಕಾಫಿ ಬೆಳೆಗಾರರಾದ ಟಿ.ಎಂ.ಉಮೇಶ್ ಕಲ್ಮಕ್ಕಿ, ಕೆ.ಆರ್.ದೀಪಕ್ ಕೊಳಲೆ, ಎಂ.ಎಸ್.ಅರುಣೇಶ್, ವಿಜಯಮಾತೆ ಚರ್ಚ್ ಸಮಿತಿ ಸದಸ್ಯ ಓ.ಡಿ.ಸ್ಟೀಫನ್, ಪ್ರಮುಖರಾದ ಮಹಮ್ಮದ್ ಜುಹೇಬ್, ಇಬ್ರಾಹಿಂ ಶಾಫಿ, ಟಿ.ಟಿ.ಇಸ್ಮಾಯಿಲ್, ಟಿ.ಎಂ.ಬಶೀರ್, ಅಬ್ದುಲ್ ಸತ್ತಾರ್, ಶಾಹಿದ್ ಮತ್ತಿತರರಿದ್ದರು.