ವಾಲ್ಮೀಕಿ ಹಗರಣ ಹಾಗೂ ಕಾಂಗ್ರೆಸ್ ಸರ್ಕಾರದ ದುರಾಡಳಿತ ಖಂಡಿಸಿ ಮೂಡಿಗೆರೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  
ಚಿಕ್ಕಮಗಳೂರು

ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಅವಕಾಶವಿಲ್ಲ

ಮೂಡಿಗೆರೆ: ಭ್ರಷ್ಟಾಚಾರದ ವಿರುದ್ಧ ಮಾತನಾಡುವ ರಾಹುಲ್ ಗಾಂಧಿ ತಮ್ಮದೇ ಪಕ್ಷದಲ್ಲಿರುವ ಭ್ರಷ್ಟರನ್ನು ಕಿತ್ತೊಗೆಯಬೇಕು. ದೇಶದ್ರೋಹಿ ವಿದೇಶಿ ಶಕ್ತಿಗಳಿಂದ ದೇಣಿಗೆ ಪಡೆದು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಎಚ್ಚರಿಸಿದರು.
ವಾಲ್ಮೀಕಿ ಹಗರಣ ಹಾಗೂ ಕಾಂಗ್ರೆಸ್ ಸರ್ಕಾರದ ದುರಾಡಳಿತ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ವಾಲ್ಮೀಕಿ ಹಗರಣವನ್ನು ಮುಚ್ಚಿಡಲು ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಅವರನ್ನು ಸಂಪುಟದಿಂದ ಕೈಬಿಡಲು ಪ್ರತಿಪಕ್ಷಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಕಿವಿಗೊಡುತ್ತಿಲ್ಲ. ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನರೇಂದ್ರ ಮಾತನಾಡಿ, ಪರಿಶಿಷ್ಟ ಸಮುದಾಯದ ಅಭಿವೃದ್ಧಿಗಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಮೀಸಲಿರಿಸಿದ್ದ 187 ಕೋಟಿ ರೂ. ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಅವರು ಶಾಮೀಲಾಗಿದ್ದು, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ ಮಾತನಾಡಿ, ಗ್ಯಾರಂಟಿ ಯೋಜನೆ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್. ಇದೀಗ ವಿದ್ಯುತ್ ಶುಲ್ಕ ಹಾಗೂ ಬಸ್‌ದರ ಏರಿಕೆ ಮಾಡಿದ್ದಾರೆ. ಪಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಬರುತ್ತಿಲ್ಲ. ವೃದ್ಯಾಪ ವೇತನ ಸ್ಥಗಿತಗೊಂಡಿದೆ. ಅಭಿವೃದ್ಧಿಗೆ ಅನುದಾನವಿಲ್ಲದೆ ಸರ್ಕಾರ ದಿನ ದೂಡುವ ದುಸ್ಥಿತಿ ಬಂದಿದೆ. ಜನರಿಗೆ ಮೂಲ ಸೌಕರ್ಯ ಒದಗಿಸಲು ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಬಿಜೆಪಿ ಮುಖಂಡರಾದ ಎಂ.ಆರ್.ಜಗದೀಶ್, ಕೆ.ಸಿ.ರತನ್, ಜೆ.ಎಸ್.ರಘು, ಪಂಚಾಕ್ಷರಿ, ಧನಿಕ್ ಕೋಡದಿಣ್ಣೆ, ಸುಧಾ ಯೋಗೇಶ್, ಅಮಿತಾ ಮುತ್ತಪ್ಪ, ಸಂಗೀತ ಪ್ರಸಾದ್, ಪರೀಕ್ಷಿತ್ ಜಾವಳಿ, ಜಯಪಾಲ್ ಇತರರಿದ್ದರು.