ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.  
ಚಿಕ್ಕಮಗಳೂರು

ಪ್ರತಿಭಾವಂತ ವಿದ್ಯಾರ್ಥಿಗಳಿಗಿದೆ ಸಾಕಷ್ಟು ಅವಕಾಶ

ಎನ್.ಆರ್.ಪುರ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಪಂಚದ ಯಾವ ಮೂಲೆಯಲ್ಲಿಯೂ ಗುರುತಿಸಿಕೊಳ್ಳಲು ಅವಕಾಶಗಳಿವೆ ಎಂದು ಭದ್ರಾ ಕಾಡ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದರು.
ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಪ್ರತಿಭಾ ಅಕಾಡೆಮಿ ಆಶ್ರಯದಲ್ಲಿ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮ ಜಿಲ್ಲೆಯ ಹೆಮ್ಮೆ. ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ರಾಜ್ಯಾದ್ಯಂತ ಎಲ್ಲ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ.ಡಾ. ಅಂಬೇಡ್ಕರ್ ಆಶಯದಂತೆ ದೇಶದ ಕಟ್ಟ ಕಡೆ ಗ್ರಾಮದ ಮಕ್ಕಳು ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂದರು.
ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಉಮೇಶ್ ಮಾತನಾಡಿ, ಡಾ.ಅಂಬೇಡ್ಕರ್ ನೀಡಿದ ಮೀಸಲಾತಿ ಉದ್ಯೋಗವಲ್ಲ. ಅದೊಂದು ಅವಕಾಶ. ಇದನ್ನು ಹಿಂದುಳಿದ ವರ್ಗದವರು ಬಳಸಿಕೊಂಡು ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ಮುಂದೆ ಬರಬೇಕು. ಡಾ.ಅಂಬೇಡ್ಕರ್ ಉನ್ನತ ಶಿಕ್ಷಣ ಪಡೆದು ಸಂವಿಧಾನ ರಚಿಸದಿದ್ದರೆ ಅವರು ಸಾಮಾನ್ಯ ಮನುಷ್ಯರಾಗಿ ಉಳಿಯುತ್ತಿದ್ದರು ಎಂದರು.
ಹೊಡೆಯಾಲದ ನಾಟಿ ವೈದ್ಯ ಡಾ.ಎಚ್.ಸಿ.ಈಶ್ವರ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಂ.ನಟರಾಜ, ಮಾನವ ಬಂಧುತ್ವ ವೇದಿಕೆ ಕ್ಷೇತ್ರ ಸಂಚಾಲಕ ಎ.ಸಿ.ಶ್ರೀನಿವಾಸ, ತಾಲೂಕು ಬಗರ್‌ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಕೆ.ಎಂ.ಸುಂದರೇಶ್, ಚಂದ್ರಮ್ಮ, ಜುಬೇದ, ಪ್ರಶಾಂತಶೆಟ್ಟಿ, ಬಿ.ನಂಜುಂಡಪ್ಪ, ಸಂತೋಷ್, ವಿಂದ್ಯಾ, ಡಿ.ರಾಮು, ಮಂಜುನಾಥ್ ಇದ್ದರು.