ಮೆಣಸೆ ಸರ್ಕಾರಿ ಪ್ರಥಮದರ್ಜೆ ಕಾಲೇಜು, ತಾಲೂಕು ಕಸಾಪ ಆಯೋಜಿಸಿದ್ದ ರಂಗಶಿಕ್ಷಣ ಸಪ್ತಾಹ ಸಮಾರೋಪದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಜಾನಪದ ನೃತ್ಯವೈಭವ ಪ್ರಸ್ತುತಪಡಿಸಿದರು. ಆಶಾ, ಮಂಜುನಾಥ್, ಚಾಣಕ್ಯರಾವ್, ಆಶಾ ಇದ್ದರು. 
ಚಿಕ್ಕಮಗಳೂರು

ರಂಗಭೂಮಿ ಸೃಜನಶೀಲತೆ ಮಾದರಿ

ಜಿ. ಗಜೇಂದ್ರ
 ಶೃಂಗೇರಿ: ನಮ್ಮ ಪಾರಂಪರಿಕ ಮೌಲ್ಯಗಳಾದ ರಂಗಭೂಮಿ, ಯಕ್ಷಗಾನ ಕಲಾವಿದರ ಸೃಜನಶೀಲತೆ ನಮಗೆ ಮಾದರಿ. ಚಲನಚಿತ್ರ ಕಲಾವಿದರನ್ನು ವೈಭವೀಕರಿಸುವಲ್ಲಿ ನಾವು ಸದಾ ನಿರತರಾಗಿದ್ದು, ಸಾಂಸ್ಕೃತಿಕ ನೆಲೆಗಟ್ಟಿನ ಅಸ್ತಿತ್ವಕ್ಕೆ ಧಕ್ಕೆ ತರುತ್ತಿದ್ದೇವೆ ಎಂದು ತಾಲೂಕು ಕಸಾಪ ಅಧ್ಯಕ್ಷ ಆಗುಂಬೆ ಗಣೇಶ್ ಹೆಗಡೆ ತಿಳಿಸಿದರು.
ಮಂಗಳವಾರ ಮೈಸೂರು ನಿರಂತರ ಫೌಂಡೇಶನ್, ಮೆಣಸೆ ಸರ್ಕಾರಿ ಪ್ರಥಮದರ್ಜೆ ಕಾಲೇಜು, ತಾಲೂಕು ಕಸಾಪ ಆಯೋಜಿಸಿದ್ದ ರಂಗಶಿಕ್ಷಣ ಸಪ್ತಾಹ ಸಮಾರೋಪ ಭಾಷಣ ಮಾಡಿದರು. ಜಾನಪದ ಸಂಸ್ಕೃತಿ ಶ್ರೀಮಂತವಾದುದು. ಕಲೆ, ನೃತ್ಯ, ಕಂಸಾಳೆ, ವೀರಗಾಸೆ, ನಂದಿಕೋಲು ಮುಂತಾದ ಕಲಾಪ್ರಕಾರಗಳು ಬದುಕಿನ ವಾಸ್ತವ ತೆರೆದಿಡುವ ಸಾಮಾಜಿಕ ಇತಿಹಾಸದ ಆಕರವಾಗಿದೆ. ಜಾನಪದ ಕಲೆ ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ, ಮೈಸೂರು ಪ್ರಾಂತ್ಯಗಳಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದೆ ಎಂದರು.
 ಶಿಕ್ಷಣದ ಜತೆ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಜಾನಪದ ಸೊಗಡನ್ನು ಅನಾವರಣಗೊಳಿಸುವ ಕಾಯಕಕ್ಕೆ ಮುಂದಾಗಬೇಕು. ವರ್ಷಕ್ಕೊಮ್ಮೆ ರಂಗಶಿಕ್ಷಣ ತರಬೇತಿ ಆಯೋಜಿಸಿದರೆ ವಿದ್ಯಾರ್ಥಿಗಳ ಪ್ರತಿಭೆ ಬೆಳಕಿಗೆ ಬರುತ್ತದೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ದೇವಾನಂದ ವರಪ್ರಸಾದ್ ಮಾತನಾಡಿ, ಅಂತರ್ಗತದಲ್ಲಿ ಇರುವ ಕ್ರಿಯಾಶೀಲತೆಗೆ ಪೂರಕವಾಗಿ ಯುವಪೀಳಿಗೆಗೆ ರಂಗತರಬೇತಿ ನೀಡುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕು. ಶಿಕ್ಷಣದೊಂದಿಗೆೆ ರಂಗಭೂಮಿ ಮಾಹಿತಿ, ಜಾನಪದಕಲೆ, ಸಾಹಿತ್ಯದ ಆಸಕ್ತಿ ಬೆಳೆಸುವಲ್ಲಿ ಗುರುವಿನ ಪಾತ್ರ ಮುಖ್ಯ. ಕಾಲೇಜುಗಳ ನಾಲ್ಕುಗೋಡೆಗಳ ನಡುವೆ ಬೆಳೆಯುವ ವಿದ್ಯಾರ್ಥಿಗಳು ಅಂಕಗಳಿಕೆಗೆ ಸೀಮಿತವಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಕಾಲೇಜು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಾಂಸ್ಕೃತಿಕ ಕಾರ್ಯಕ್ರಮ ರೂಪಿಸುತ್ತದೆ. ರಂಗಭೂಮಿ ಎಂದರೆ ಕೇವಲ ನೃತ್ಯ ಮಾಡುವುದು, ಪದಗಳನ್ನು ಹಾಡುವುದಕ್ಕೆ ಸೀಮಿತವಾಗಿಲ್ಲ. ರಂಗಭೂಮಿಗೆ ಸಂಬಂಧಗಳನ್ನು ಗಟ್ಟಿ ಮಾಡುವ ಅದ್ಭುತ್ತಶಕ್ತಿ ಹೊಂದಿದೆ. ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಸೊಗಡಿನ ಅರಿವು ಇದ್ದರೆ ಅವರು ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯ ಎಂದರು.
ಪ್ರಾಚಾರ್ಯೆ ಭಾರತಿ, ಕಾಲೇಜಿನ ಸಿಡಿಸಿ ಕಾರ್ಯಾಧ್ಯಕ್ಷ ತ್ರಿಮೂರ್ತಿ, ಕಜಾಪ ಅಧ್ಯಕ್ಷ ಅಂಗುರ್ಡಿ ದಿನೇಶ್, ತಾಲೂಕು ಕಸಾಪ ಯುವ ಘಟಕದ ಅಧ್ಯಕ್ಷ ಸಚಿನ್, ಸಪ್ತಾಹ ಸಂಯೋಜಕ ರಾಘವೇಂದ್ರ ರೆಡ್ಡಿ ಇದ್ದರು.