- ಕಳಸ ತಾಲೂಕಿನ ಪರ್ವತ
- ಶಿಖರಗಳಿಗೆ ಜೀವಕಳೆ
ಸುಧೀಶ್ ಸುವರ್ಣ ಕಳಸ: ಕಣ್ಣಾಯಿಸಿದಷ್ಟೂ ದೂರ ಹಬ್ಬಿರುವ ಹಸಿರು ಬೆಟ್ಟಗಳ ಸಾಲು, ಮಂಜಿನ ಹೊದಿಕೆ ಹೊದ್ದ ಕಣಿವೆಗಳು, ಧುಮ್ಮಿಕ್ಕುವ ಜಲಪಾತಗಳು, ಜುಳುಜುಳು ನಾದದೊಂದಿಗೆ ಹರಿಯುವ ಹೊಳೆ, ಹಳ್ಳಗಳು, ಗಾಳಿ, ಮಳೆ ಹನಿಗಳ ಸದ್ದಿಗೆ ತೂಗುವ ಕಾಡುಮೇಡುಗಳು...ಇದು ಯಾವುದೇ ಚಿತ್ರಕಾರನ ಕಲ್ಪನೆಯಲ್ಲ, ಪ್ರವಾಸಿ ತಾಣ ಕಳಸ ತಾಲೂಕಿನ ಮುಂಗಾರು ಕಾಲದ ಅದ್ಭುತ ಚಿತ್ರಣ.
ಜೀವವೈವಿಧ್ಯದ ಅಮೂಲ್ಯ ಸಂಪತ್ತಾಗಿರುವ ಪಶ್ಚಿಮಘಟ್ಟ ಪ್ರದೇಶಕ್ಕೆ ಮುಂಗಾರು ಹೊಸ ಹಸಿರಿನ ಜೀವ ತುಂಬಿದೆ. ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಹೊಸ ಮೆರುಗು ನೀಡಿದೆ. ಹಚ್ಚಹಸಿರಿನ ಹೊದಿಕೆ ಹೊದ್ದ ಬೆಟ್ಟಗುಡ್ಡಗಳು, ಮಂಜಿನ ತೆರೆಯ ಹಿಂದೆ ಕಾಣಿಸಿಕೊಳ್ಳುವ ಪರ್ವತ, ಶಿಖರಗಳು, ತಂಪಾದ ಗಾಳಿ ಮತ್ತು ಹಿತವಾದ ವಾತಾವರಣ ನಿಸರ್ಗಪ್ರಿಯರನ್ನು ಮಂತ್ರಮುಗ್ಧರನ್ನಾಗಿಸುತ್ತಿವೆ.
ಮಲೆನಾಡಿನಲ್ಲಿ ಮಳೆಗಾಲ ಆರಂಭವಾದರೆ ಪ್ರಕೃತಿಯೇ ಹೊಸ ಜೀವ ಪಡೆದುಕೊಂಡಂತೆ ಭಾಸವಾಗುತ್ತದೆ. ಬೆಳಗಿನ ಜಾವ ಬೆಟ್ಟಗಳ ಮೇಲೆ ತೇಲಾಡುವ ಮಂಜಿನ ಮೋಡಗಳು, ಸಂಜೆಯ ಹೊತ್ತಿಗೆ ಮಂಜಿನ ನಡುವೆ ಮಿಂಚುಹುಳಗಳಂತೆ ಕಾಣುವ ವಾಹನಗಳ ದೀಪಗಳು ಕನಸಿನ ಲೋಕವೊಂದನ್ನು ಸೃಷ್ಟಿಸುತ್ತವೆ. ಪ್ರಕೃತಿಯ ಈ ರಮ್ಯ ವೈಭವವನ್ನು ಕಂಡು ಪ್ರತಿಯೊಬ್ಬರೂ ಕ್ಷಣಕಾಲ ಮೈಮರೆಯುವಂತಾಗುತ್ತದೆ.
ಕುದುರೆಮುಖ ಅಭಯಾರಣ್ಯದ ಅರಣ್ಯ ಪ್ರದೇಶಗಳು, ಶೋಲಾ ಕಾಡುಗಳು ಹಾಗೂ ಬೆಟ್ಟಗುಡ್ಡಗಳು ಹಸಿರಿನ ಹೊದಿಕೆಯ ವಿಶೇಷ ಕಳೆ ಪಡೆದುಕೊಂಡಿವೆ. ಕ್ಯಾತನಮಕ್ಕಿ, ನೇತ್ರಾವತಿ ಶಿಖರ, ಕುದುರೆಮುಖ ಶಿಖರ, ಮೈದಾಡಿ ಗುಡ್ಡ, ಕುರುಂಜಲ್ ಗುಡ್ಡ ಸೇರಿದಂತೆ ಹಲವು ಪ್ರವಾಸಿ ತಾಣಗಳು ಹಸಿರು ಸೀರೆಯುಟ್ಟು ಕಂಗೊಳಿಸುತ್ತಿವೆ.
ಸುರುಮನೆ ಜಲಪಾತ, ಕಡಂಬಿ ಜಲಪಾತ, ಹನುಮನಗುಂಡಿ ಜಲಪಾತ, ಎಳನೀರು ಜಲಪಾತ ಹಾಗೂ ಭದ್ರಾ ನದಿಯ ಅಂಭಾತೀರ್ಥಗಳು ಮೈದುಂಬಿ ಹರಿಯುತ್ತಿವೆ. ಜಲಪಾತಗಳ ಧುಮ್ಮಿಕ್ಕುವ ಶಬ್ದ ಹಾಗೂ ತಂಪಾದ ನೀರಿನ ಸಿಂಚನ ಪ್ರಕೃತಿಯ ಅದ್ಭುತ ಅನುಭವ ನೀಡುತ್ತಿವೆ. ಈ ಬಾರಿ ಮುಂಗಾರು ಪೂರ್ವದಲ್ಲಿಯೇ ಉತ್ತಮ ಮಳೆಯಾಗಿರುವುದರಿಂದ ತಾಲೂಕಿನಾದ್ಯಂತ ಪ್ರಕೃತಿ ಹೊಸ ರೂಪ ಪಡೆದುಕೊಂಡಿದೆ. ಮುಗಿಲೆತ್ತರಕ್ಕೆ ಬೆಳೆದುನಿಂತ ದಟ್ಟ ಅರಣ್ಯಗಳು, ಹಸಿರು ಕಾರ್ಪೆಟ್ ಹೊದ್ದಂತೆ ಕಾಣುವ ಶೋಲಾ ಪರ್ವತಗಳು ಹಾಗೂ ಮಂಜಿನ ನಡುವೆ ಮರೆಮಾಚುವ ಕಣಿವೆಗಳು ಸ್ವರ್ಗವೇ ಭೂಲೋಕಕ್ಕೆ ಇಳಿದಂತೆ ಭಾಸವಾಗುತ್ತಿದೆ.
ಮಲೆನಾಡಿನ ನಿಸರ್ಗದ ಸೌಂದರ್ಯ ಸ್ಥಳೀಯ ಹೋಂಸ್ಟೇ, ರೆಸಾರ್ಟ್ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೂ ಹೊಸ ಚೈತನ್ಯ ತುಂಬಿದೆ. ಕಳಸ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಹೋಂಸ್ಟೇಗಳಲ್ಲಿ ವಾರಾಂತ್ಯಗಳಲ್ಲಿ ಕೊಠಡಿಗಳು ಸಂಪೂರ್ಣ ಭರ್ತಿಯಾಗುತ್ತಿವೆ. ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕುಟುಂಬ ಸಮೇತರಾಗಿ ಆಗಮಿಸುತ್ತಿರುವ ಪ್ರವಾಸಿಗರು ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಕಾಡು, ತೋಟ, ಗದ್ದೆ ಹಾಗೂ ಜಲಪಾತಗಳನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ಕಳಸ-ಮಂಗಳೂರು ರಾಜ್ಯ ಹೆದ್ದಾರಿಯ ಕುದುರೆಮುಖ ಮಾರ್ಗದಲ್ಲಿ ಮಳೆಯ ಪರಿಣಾಮ ಅನೇಕ ಜರಿತೊರೆಗಳು ಜೀವ ಪಡೆದುಕೊಂಡಿವೆ. ರಸ್ತೆಯ ಬದಿಯಲ್ಲೇ ಹರಿಯುವ ಜರಿಗಳು ಪ್ರಯಾಣಿಕರು ವಾಹನ ನಿಲ್ಲಿಸಿ ಪ್ರಕೃತಿಯ ಸೊಬಗನ್ನು ಕಂಡು ಸಂಭ್ರಮಿಸುವಂತೆ ಮಾಡುತ್ತಿವೆ. ಮಹಿಳೆಯರು, ಮಕ್ಕಳು, ಯುವಜನರು ಹಾಗೂ ವೃದ್ಧರು ಪ್ರಕೃತಿ ವೈಭವಕ್ಕೆ ಮನಸೋತು ಫೋಟೋ ಕ್ಲಿಕ್ಕಿಸುವುದು, ಜಲಧಾರೆಗಳ ಬಳಿ ಕಾಲ ಕಳೆಯುವುದು, ನೀರಿನಲ್ಲಿ ಆಟವಾಡುವುದು ಸಾಮಾನ್ಯವಾಗಿದೆ. ಹಲವರು ಸಾಮಾಜಿಕ ಜಾಲತಾಣಗಳಿಗಾಗಿ ವಿಡಿಯೋ ಹಾಗೂ ಫೋಟೋಗಳನ್ನು ಸೆರೆಹಿಡಿದು ಮಲೆನಾಡಿನ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ.