ರಾಜ್ಯ ಸರ್ಕಾರದ ಅವೈಜ್ಞಾನಿಕ ಮಾನದಂಡ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶೃಂಗೇರಿ: ವೃದ್ಧಾಪ್ಯ ವೇತನ ಆರ್ಥಿಕವಾಗಿ ಹಿಂದುಳಿದು ಜೀವನ ಸಾಗಿಸುತ್ತಿರುವ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಜಾರಿಗೆ ತಂದ ಮಹತ್ವದ ಸಾಮಾಜಿಕ ಭದ್ರತಾ ಯೋಜನೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಹೊಸ ಮಾನದಂಡಗಳನ್ನು ಜಾರಿಗೆ ತಂದು ಆರು ತಿಂಗಳಿಂದ ಸಾವಿರಾರು ಅರ್ಹ ವೃದ್ಧರಿಗೆ ವೃದ್ಧಾಪ್ಯ ವೇತನವನ್ನು ನೀಡದೆ ವಂಚಿಸಿದೆ ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಭರತ್ ಗಿಣಿಕಲ್ ಆರೋಪಿಸಿದರು.
ರಾಜ್ಯ ಸರ್ಕಾರದ ವಿವಿಧ ಯೋಜನೆ ವೈಲ್ಯಗಳನ್ನು ವಿರೋಧಿಸಿ ಸೋಮವಾರ ತಾಲೂಕು ಕಚೇರಿ ಎದುರು ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿ, ವೃದ್ಧಾಪ್ಯ ವೇತನಕ್ಕೆ ಹೊಸ ಮಾನದಂಡಗಳನ್ನು ಜಾರಿಗೆ ತರದೆ ಬಿಪಿಎಲ್ ಕಾರ್ಡ್ ಮತ್ತು ಆದಾಯ ದೃಢೀಕರಣವನ್ನು ಮಾನದಂಡವನ್ನಾಗಿ ಪರಿಗಣಿಸಿ ಅರ್ಹ ಲಾನುಭವಿಗಳಿಗೆ ವೃದ್ಧಾಪ್ಯ ವೇತನ ನೀಡಬೇಕು ಎಂದು ಮನವಿ ಮಾಡಿದರು.
ಪತಿಯನ್ನು ಕಳೆದುಕೊಂಡು ಮಾನಸಿಕ ನೋವು ಹಾಗೂ ಆರ್ಥಿಕ ಸಂಕಷ್ಟದ ನಡುವೆ ಜೀವನ ಸಾಗಿಸುತ್ತಿರುವ ಮಹಿಳೆಯರು ಸ್ವಾಭಿಮಾನದಿಂದ ಬದುಕಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿಧವಾ ವೇತನ ಸಾಮಾಜಿಕ ಭದ್ರತಾ ಯೋಜನೆಯಾಗಿದೆ.ಜೀವನದ ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ವಿಧವೆಯರಿಗೆ ಈ ವೇತನ ಆಸರೆಯಾಗಿ, ಆತ್ಮಸ್ಥೈರ್ಯದಿಂದ ಬದುಕಲು ನೆರವಾಗಬೇಕು ಎಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ಆದರೆ ರಾಜ್ಯ ಸರ್ಕಾರ ವಿಧವಾ ವೇತನಕ್ಕೆ ಹೊಸ ಮಾನದಂಡಗಳನ್ನು ಜಾರಿಗೆ ತಂದು ಈಗಾಗಲೇ ಅರ್ಹರಾಗಿರುವ ಅನೇಕ ವಿಧವೆಯರನ್ನು ಯೋಜನೆಯಿಂದ ಹೊರಗಿಟ್ಟಿದೆ. ಹೊಸ ಮಾನದಂಡಗಳ ಹೆಸರಿನಲ್ಲಿ ಬಡ ಹಾಗೂ ನೊಂದ ಮಹಿಳೆಯರಿಗೆ ಸಿಗಬೇಕಾದ ಸೌಲಭ್ಯವನ್ನು ನಿರಾಕರಿಸಿರುವುದು ಸರಿಯಲ್ಲ ಎಂದರು.
ಜೆಡಿಎಸ್ ತಾಲೂಕು ಘಟಕದ ಉಪಾಧ್ಯಕ್ಷ ಗಂಡಘಟ್ಟ ಶ್ರೀಧರ್ ಮಾತನಾಡಿ, ವಿಕಲಚೇತನ ವ್ಯಕ್ತಿಗಳು ಸಮಾಜದಲ್ಲಿ ಇತರರಂತೆ ಆತ್ಮವಿಶ್ವಾಸದಿಂದ ಬದುಕಲು ನೆರವಾಗುವುದೇ ಅಂಗವಿಕಲ ವೇತನದ ಉದ್ದೇಶ. ರಾಜ್ಯಸರ್ಕಾರ ತನ್ನ ವೈಲ್ಯ ಮುಚ್ಚಿಹಾಕಲು ವೆಚ್ಚ ಕಡಿತದ ಹೆಸರಿನಲ್ಲಿ ಅಂಗವಿಕಲರ ವೇತನಕ್ಕೂ ಕತ್ತರಿ ಹಾಕುತ್ತಿದೆ. ಅಂಗವಿಕಲರ ವೇತನಕ್ಕೆ ವಾರ್ಷಿಕ 32,000 ರೂ.ಆದಾಯ ಮಿತಿ ನಿಗದಿಪಡಿಸಿರುವುದು ದುರದೃಷ್ಟಕರ. ಆದ್ದರಿಂದ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ವಾರ್ಷಿಕ 1,20,000 ಆದಾಯ ಮಿತಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಮಾಗಲು ಅಚ್ಯುತ್, ದಿನೇಶ್ ಹೆಗ್ಡೆ ಕಲ್ಕಟ್ಟೆ, ದೇವೆಂದ್ರ ಹುಲುಗಾರುಮನೆ, ನವೀನ್ ಕೊಲ್ಲಿ, ಸೂರ್ಡಿ ಚಂದ್ರಶೇಖರ್, ಸತೀಶ್ ಚೆನ್ನೆಗುಡ್ಡೆ, ನೆಮ್ಮಾರ್ ಶಂಕರಪ್ಪ, ಯಡದಾಳು ಮಂಜುನಾಥ್ ಹಾಜರಿದ್ದರು.