ಗೌರಾಪುರದ ಶ್ರೀ ಚೆನ್ನಬಸವೇಶ್ವರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಮನ-ಮನೆಗಳಿಗೆ ಬಸವಜ್ಯೋತಿ ಕಾರ್ಯಕ್ರಮವನ್ನು ಶಿಕ್ಷಕಿ ಪಿ.ಶಾರದಮ್ಮ ಉದ್ಘಾಟಿಸಿದರು.
ತರೀಕೆರೆ: ಅರಿತು ಬಾಳುವಂತೆ ಪ್ರೇರೇಪಿಸುವುದೇ ಬಸವಾದಿ ಶರಣರ ವಚನದ ಆಶಯವಾಗಿದೆ ಎಂದು ಶಿಕ್ಷಕಿ ಪಿ.ಶಾರದಮ್ಮ ಹೇಳಿದರು.
ಗೌರಾಪುರ ಗ್ರಾಮದ ಶ್ರೀ ಚೆನ್ನಬಸವೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕ ಏರ್ಪಡಿಸಿದ್ದ ಮನ-ಮನೆಗಳಿಗೆ ಬಸವ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗಲು ಅರಿವು ಮುಖ್ಯ. ಅರಿವಿಲ್ಲದೆ ಆಚರಣೆ ಅಸಾಧ್ಯ. ಅರಿವು ಆಚಾರದ ಸಮ್ಮಿಲನವೇ ಶರಣರ ಸಂಗಮ ಎಂದರು.
ತರೀಕೆರೆ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಜಿ.ಚಂದ್ರಶೇಖರ್ ಮಾತನಾಡಿ, ನಮ್ಮ ಅಂತರಂಗ ಬಹಿರಂಗ ಶುದ್ಧಿಗಾಗಿ ನಾವು ದಿನನಿತ್ಯ ಶರಣರ ವಚನ ಪಠಣ ಮಾಡಬೇಕು ಎಂದರು.
ಜಿಲ್ಲಾ ಕೋಶಾಧ್ಯಕ್ಷ ಡಿ.ಪಿ.ರಾಜಪ್ಪ ಮಾತನಾಡಿ, ವಚನ ಸಾಹಿತ್ಯ ಈ ನಾಡಿನ ಪ್ರಾಕೃತಿಕ ಸಂಪತ್ತಿಗೆ ಸಮವಾಗಿದ್ದು, ಇದನ್ನು ಅನುಸರಿಸುವುದರಿಂದ ಮಾನವೀಯ ಮೌಲ್ಯಗಳು ವೃದ್ಧಿಯಾಗಲಿದೆ. ಲಿಂಗಾಯತ ಒಕ್ಕೂಟ ಪ್ರತಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಸಾಮೂಹಿಕವಾಗಿ ಒಂದು ಸಾವಿರ ಜನರು ಭಾಗಿಯಾಗಿ ವಚನ ಹಾಡುವ ಪ್ರಾಯೋಗಿಕ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಅಜ್ಜಂಪುರ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಟಿ.ಸಿ.ಶಿವಕುಮಾರ ಸ್ವಾಮಿ, ಜಯಮೂರ್ತಿ, ಶ್ರೀ ಚೆನ್ನಬಸವೇಶ್ವರ ಭಜನಾ ಮಹಿಳಾ ಮಂಡಳಿ ಸದಸ್ಯರು ಗ್ರಾಮಸ್ಥರು ಮತ್ತಿತರರಿದ್ದರು.