ಬುಕ್ಕಾಂಬುದಿ ಗ್ರಾಮದ ಬೆಟ್ಟದ ಮೇಲಿನ ಗವಿಯಲ್ಲಿ ನೆಲೆಸಿರುವ ಉಜ್ಜಯಿನಿ ಲಿಂಗೈಕ್ಯ ಶ್ರೀಸಿದ್ಧಲಿಂಗ ಜಗದ್ಗುರುಗಳ ಮಂಗಲ ಮೂರ್ತಿಗೆ ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಮಠಾಧೀಶರು ಇದ್ದರು. 
ಚಿಕ್ಕಮಗಳೂರು

ಭೌತಿಕ ಸಂಪತ್ತಿಗಿಂತ ಶಾಂತಿ ಜೀವನದ ನಿಜವಾದ ಸಂಪತ್ತು

ತರೀಕೆರೆ: ಭೌತಿಕ ಬದುಕು ಶಾಶ್ವತವಲ್ಲ. ಮನುಷ್ಯನಿಗೆ ತೃಪ್ತಿ ಸಂತೃಪ್ತಿ ಇಲ್ಲವಾದರೂ ಭೌತಿಕ ಸಂಪತ್ತಿಗಿಂತ ಶಾಂತಿ ಜೀವನದ ನಿಜವಾದ ಸಂಪತ್ತು ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಅಜ್ಜಂಪುರ ತಾಲೂಕಿನ ಬುಕ್ಕಾಂಬುದಿ ಬೆಟ್ಟದ ಮೇಲೆ ಉಜ್ಜಯಿನಿ ಲಿಂಗೈಕೈ ಶ್ರೀ ಸಿದ್ಧಲಿಂಗ ಜಗದ್ಗುರುಗಳು ತಪೋಗೈದ ಗವಿಯಲ್ಲಿ ಕೈಗೊಂಡಿರುವ ಮೌನ ಅನುಷ್ಟಾನದ ಹಿನ್ನೆಲೆಯಲ್ಲಿ ಮಂಗಲ ಮೂರ್ತಿಗೆ ಪ್ರಥಮ ದಿನ ಪೂಜಾನುಷ್ಠಾನ ನೆರವೇರಿಸಿದ ಬಳಿಕ ಲಿಖಿತ ಆಶೀರ್ವಚನ ನೀಡಿದರು.
ಮನುಷ್ಯನಾದವನು ಜೀವನದಲ್ಲಿ ಧರ್ಮ,ಅರ್ಥ,ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸಿಕೊಳ್ಳದೆ ಹೋದರೆ ಜೀವನ ಸಾಲ್ಯವಾಗುವುದಿಲ್ಲ. ಸುಖ ಬಯಸುವ ಮನುಷ್ಯ ಸನ್ಮಾರ್ಗದಲ್ಲಿ ನಡೆಯುವುದಿಲ್ಲ. ಸುಖದ ಮೂಲ ಧರ್ಮಾಚರಣೆಯಲ್ಲಿ ಇದೆ ಎಂಬುದನ್ನು ಶ್ರೀಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ನಿರೂಪಿಸಿದ್ದಾರೆ. ಶಿವತಪ, ಶಿವಕರ್ಮ, ಶಿವಜಪ, ಶಿವಧ್ಯಾನ ಮತ್ತು ಶಿವಜ್ಞಾನ ಎಂಬ ಪಂಚಯಜ್ಜಗಳನ್ನು ಅನುಸರಿಸಿ ಬದುಕಿನಲ್ಲಿ ಶ್ರೇಯಸ್ಸನ್ನು ಕಾಣಬಹುದು ಎಂದರು.
ಪರಮ ತಪಸ್ವಿ ಲಿಂಗೈಕ್ಯ ಶ್ರೀಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಅನುಷ್ಠಾನ ಕೈಕೊಂಡು ಗ್ರಾಮಕ್ಕೆ ತಗುಲಿದ ಶಾಪ ವಿಮೋಚನೆ ಮಾಡಿ ಆಶೀರ್ವದಿಸಿದರು. ಶ್ರೀರಂಭಾಪುರಿ ಪೀಠದ ಸಮಸ್ಯೆ ಪರಿಹರಿಸಿ ಶ್ರೀಶಿವಾನಂದ ಜಗದ್ಗುರುಗಳ ಪಟ್ಟಾಭಿಷೇಕ ನೆರವೇರಿಸಿ ಶುಭ ಹಾರೈಸಿದವರು. ಇಂಥ ಪವಿತ್ರ ಕ್ಷೇತ್ರದಲ್ಲಿ ಗುರುಬಲ, ಆತ್ಮಬಲ ಮತ್ತು ಸಮಾಜದಲ್ಲಿ ಸಾಮರಸ್ಯ ಮೂಡಿ ಬರಬೇಕೆಂಬ ಸತ್ಯ ಸಂಕಲ್ಪದಿಂದ 5 ದಿನ ಗವಿಯಲ್ಲಿ ಇಷ್ಟಲಿಂಗ ಪೂಜೆ, 7ನೇ ದಿನ ಲಿಂಗೈಕ್ಯ ಶ್ರೀಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ 90ನೇಪುಣ್ಯ ಸ್ಮರಣೋತ್ಸವ ಜರುಗಲಿದೆ. ಪುಣ್ಯದಿನ ಮತ್ತು ಜನ್ಮದಿನ ಒಂದೇ ದಿನ ಬಂದಿರುವುದರಿಂದ ಭಕ್ತರು ಕಾರ್ಯಕ್ರಮ ವಿಶೇಷವಾಗಿ ಸಂಘಟಿಸಿರುವುನ್ನು ಮರೆಯಲಾಗದು ಎಂದು ಹೇಳಿದರು.
ಶ್ರೀರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನಡೆಸಿದ ನಂತರ ಎಡೆಯೂರು ಕ್ಷೇತ್ರದ ಶ್ರೀರೇಣುಕ ಶಿವಾಚಾರ್ಯ ಸ್ವಾಮಿಗಳು ಧರ್ಮ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮನುಷ್ಯನಿಗೆ ಏನೆಲ್ಲ ಸಂಪತ್ತು ಇದ್ದರೂ ಮಾನಸಿಕ ಶಾಂತಿಯಿಲ್ಲ. ಸಂಸ್ಕಾರ ಸದ್ವಿಚಾರಗಳಿಂದ ಬದುಕು ಸವೃದ್ಧಗೊಳ್ಳಬೇಕಾಗಿದೆ ಎಂದರು.
ತಾವರೆಕೆರೆ, ಬಿಳಕಿ, ತೊಗರ್ಸಿ, ರಟ್ಟೀಹಳ್ಳಿ, ಚಿಕ್ಕಮಗಳೂರು ಶ್ರೀಗಳು ಮತ್ತು ಹಳೇಹುಬ್ಬಳ್ಳಿ ಹಿರೇಮಠದ ಶ್ರೀಗಳಲ್ಲದೆ, ಶ್ರೀಮದ್ ಉಜ್ಜಯಿನಿ ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟ್‌ನ ಕಾರ್ಯದರ್ಶಿ ಎಚ್.ಪಿ.ಸುರೇಶ, ಪ್ರಮುಖರಾದ ಗುರುಮೂರ್ತಿ, ಎಚ್.ಪಿ.ಮಲ್ಲಿಕಾರ್ಜುನ, ನವೀನ ಮತ್ತಿತರರಿದ್ದರು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.