ಚಿಕ್ಕಮಗಳೂರು ರಾಮನಹಳ್ಳಿಯ ಡಿಎಆರ್ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪ್ರಸಕ್ತ ಸಾಲಿನ ಪೊಲೀಸ್ ಧ್ವಜವನ್ನು ಡಿಸಿ ಎನ್.ಎಂ.ನಾಗರಾಜ್ ಬಿಡುಗಡೆ ಮಾಡಿದರು. ಜಿತೇಂದ್ರ ಕುಮಾರ್ ದಯಾಮ, ಎಚ್.ಎಸ್.ಕೀರ್ತನಾ, ಸಿ.ಟಿ.ಜಯಕುಮಾರ್, ನಿವೃತ್ತ ಎಆರ್‌ಎಸ್‌ಐ ತೌಫಿಕ್ ಅಹಮದ್ ಮತ್ತಿತರರಿದ್ದರು.
- ದೇಶದ ವಿವಿಧ ರಾಜ್ಯದ ಪೊಲೀಸ್ ಅಧಿಕಾರಿ, ಸಿಬ್ಬಂದಿ ರಾಜ್ಯಕ್ಕೆ ಆಗಮಿಸಿ ತರಬೇತಿ
- ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ
- ಕರ್ನಾಟಕ ಪೊಲೀಸ್ ಅಪರಾಧ ಪತ್ತೆಯಲ್ಲಿ ದೇಶದಲ್ಲಿ ಹೆಚ್ಚುಗಾರಿಕೆ ಸಾಧಿಸಿದ ಅನೇಕ ನಿರ್ದಶನ
ಚಿಕ್ಕಮಗಳೂರು: ಅಪರಾಧ ಪತ್ತೆಯಲ್ಲಿ ಕರ್ನಾಟಕ ಪೊಲೀಸ್ ಅಳವಡಿಸಿಕೊಂಡಿರುವ ತಂತ್ರಜ್ಞಾನ ಇಡೀ ದೇಶಕ್ಕೆ ಮಾದರಿಯಾಗಿದ್ದು, ದೇಶದ ವಿವಿಧ ರಾಜ್ಯದ ಪೊಲೀಸ್ ಅಧಿಕಾರಿ, ಸಿಬ್ಬಂದಿ ರಾಜ್ಯಕ್ಕೆ ಆಗಮಿಸಿ ತರಬೇತಿ ಪಡೆಯುತ್ತಿದ್ದಾರೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಹೇಳಿದರು.
ನಗರದ ರಾಮನಹಳ್ಳಿಯ ಡಿಎಆರ್ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪ್ರಸಕ್ತ ಸಾಲಿನ ಪೊಲೀಸ್ ಧ್ವಜ ಬಿಡುಗಡೆ ಮಾಡಿ ಮಾತನಾಡಿದ ಅವರು, ಕರ್ನಾಟಕ ಪೊಲೀಸ್ ಅಪರಾಧ ಪತ್ತೆಯಲ್ಲಿ ದೇಶದಲ್ಲಿ ಹೆಚ್ಚುಗಾರಿಕೆ ಸಾಧಿಸಿದ ಅನೇಕ ನಿರ್ದಶನಗಳಿವೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದೆ. ಪ್ರತಿ ದಿನ ಸೈಬರ್ ಕ್ರೈಮ್ ಪ್ರಕರಣದಲ್ಲಿ ಹಣ ಕಳೆದುಕೊಂಡವರಿಗೆ ಮರಳಿ ಹಣ ಕೊಡಿಸುವ ಕಾರ್ಯವನ್ನು ತಂತ್ರಜ್ಞಾನ ಬಳಕೆ ಮಾಡಿಕೊಂಡು ಪೊಲೀಸ್ ಇಲಾಖೆ ಮಾಡುತ್ತಿದೆ. ಕರ್ನಾಟಕ ಪೊಲೀಸ್ ದೇಶದಲ್ಲಿ ಮೊದಲ ಡ್ರೋಣ್ ಪಡೆ ಸ್ಥಾಪಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಸಾರ್ವಜನಿಕರು ನೆಮ್ಮದಿಯಿಂದ ಬದುಕುತ್ತಿರುವುದಕ್ಕೆ ಪೊಲೀಸ್ ಇಲಾಖೆ ಕಾರಣವಾಗಿದೆ. ರಾಜ್ಯ ಸರ್ಕಾರ ಪೊಲೀಸರ ಕ್ಷೇಮಕ್ಕಾಗಿ ವಿಶೇಷ ಸಂದರ್ಭದಲ್ಲಿ ರಜೆ ಘೋಷಣೆ ಮಾಡಿದೆ. ಈ ಮೂಲಕ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ, ವೃತ್ತಿ ಮತ್ತು ಕುಟುಂಬವನ್ನು ಉತ್ತಮವಾಗಿ ನಿರ್ವಹಣೆಮಾಡುವುದಕ್ಕೆ ಸಹಕಾರಿಯಾಗಿದೆ. ಆರೋಗ್ಯ ಸಂಜೀವಿನಿ ಮೂಲಕ ಪೊಲೀಸರು ಮತ್ತು ಅವರ ಕುಟುಂಬಕ್ಕೆ ಆರೋಗ್ಯ ಸೇವೆ ನೀಡುತ್ತಿದೆ. ಸಾರ್ವಜನಿಕರು ಪೊಲೀಸರಿಗೆ ನೈತಿಕವಾಗಿ ಮತ್ತು ಆರ್ಥಿಕವಾಗಿ ಬೆಂಬಲ ನೀಡುವ ಕಾರ್ಯ ಆಗಬೇಕು ಎಂದರು.
ಜಿಪA ಸಿಇಒ ಎಚ್.ಎಸ್. ಕೀರ್ತನಾ ಮಾತನಾಡಿ, ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿ ಒಂದು ಹಬ್ಬವನ್ನು ಆಚರಣೆ ಮಾಡದೇ ಸಮಾಜಕ್ಕೆ ದುಡಿಯುತ್ತಿದ್ದಾರೆ. ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹುಟ್ಟುಹಬ್ಬ ಆಚರಣೆ ಮಾಡುವುದಕ್ಕೂ ಆದೇಶ ಬರಬೇಕಾದ ವ್ಯವಸ್ಥೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಾಗರಿಕರು ಜವಾಬ್ದಾರಿಯಿಂದ ನಡೆದುಕೊಂಡರೆ ಪೊಲೀಸರಿಗೆ ಸ್ವಲ್ಪಮಟ್ಟಿಗೆ ಕಾರ್ಯದ ಒತ್ತಡ ಕಡಿಮೆ ಆಗಬಹುದು ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ, ಎಎಸ್‌ಪಿ ಸಿ.ಟಿ.ಜಯಕುಮಾರ್, ಮುಖ್ಯ ಅತಿಥಿಯಾಗಿ ನಿವೃತ್ತ ಎಆರ್‌ಎಸ್‌ಐ ತೌಫಿಕ್ ಅಹಮದ್, ಸಿಡಿಎ ಅಧ್ಯಕ್ಷ ಮಂಜೇಗೌಡ ಸೇರಿದಂತೆ ಮತ್ತಿತರರಿದ್ದರು.