ಎನ್.ಆರ್.ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕಿಯರನ್ನು ಸನ್ಮಾನಿಸಲಾಯಿತು. ಕೃಪಾಲ ಗೌಡ, ದಕ್ಷಿಣಮೂರ್ತಿ, ಸೋಮಶೇಖರ್. ವಿದ್ಯಾನಂದ್, ಕೃಷ್ಣಮೂರ್ತಿ ಇದ್ದರು
ಎನ್.ಆರ್.ಪುರ: ಪ್ರೀತಿಯಿಂದ ಆರೈಕೆ ಮಾಡಿ ರೋಗಿಗಳ ರೋಗ ಗುಣಪಡಿಸುವಲ್ಲಿ ಶುಶ್ರೂಷಕಿಯರ ಪಾತ್ರ ಪ್ರಮುಖವಾಗಿದೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ಅರವಳಿಕೆ ತಜ್ಞ ಡಾ.ವೀರಪ್ರಸಾದ್ ಹೇಳಿದರು.
ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಹಾಗೂ ಸಾರ್ವಜನಿಕ ಆಸ್ಪತ್ರೆ ಆಶ್ರಯದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಫ್ಲಾರೆನ್ಸ್ ನೈಟಿಗೆಲ್ ಅವರ ಜನ್ಮ ದಿನವನ್ನು ಅಂತರಾಷ್ಟ್ರೀಯ ನರ್ಸ್ ಡೇಯಾಗಿ ಆಚರಿಸಲಾಗುತ್ತಿದೆ. ಅವರ ನಿಸ್ವಾರ್ಥ ಸೇವೆ ಪರಿಗಣಿಸಿ ಅವರನ್ನು ಲೇಡಿ ವಿಥ್‌ಲ್ಯಾಂಪ್ ಎಂದು ಕರೆಯುತ್ತಾರೆ. ಇವರ ಸೇವೆ ಶುಶ್ರೂಷಕಿಯರಿಗೆ ನಿಸ್ವಾರ್ಥ ಸೇವೆ ಮಾಡಲು ಪ್ರೇರಣೆ ನೀಡಿದೆ. ಕರೊನಾ ಸಮಯದಲ್ಲಿ ತಮ್ಮ ಕುಟುಂಬವನ್ನು ಲೆಕ್ಕಿಸದೆ ನಿಸ್ವಾರ್ಥ ಸೇವೆ ಶುಶ್ರೂಷಕಿಯರಿಗೆ ಸಲ್ಲುತ್ತಿದೆ. ಈ ವಿಭಾಗದಲ್ಲಿ ಸೇವೆ ಸಲ್ಲಿಸುವವರಿಗೆ ತಾಯಿ ಪ್ರೀತಿ, ತಂದೆಯ ಕರುಣೆ, ಸಹನೆ, ಸಂಯಮವಿರಬೇಕು ಎಂದರು.
ಶುಶ್ರೂಷಕಿ ಶಿಲ್ಪಾ ಕುಮಾರಿ ಮಾತನಾಡಿ, ಫ್ಲಾರೆನ್ಸ್ ನೈಟಿಗೆಲ್ ಅವರು ಕಷ್ಟದಲ್ಲಿರುವ ಜನರ ಸೇವೆಗೆ ತಮ್ಮ ಜೀವನ ಮುಡುಪಾಗಿಟ್ಟರು. ರೋಗಿ ಸೇವೆ ದೇವರ ಸೇವೆ ಎಂದು ನಂಬಿದ್ದರು. ಉತ್ತಮ ಶಿಕ್ಷಕಿ, ಆರೋಗ್ಯ ಸೇವಕಿಯಾಗಿ ರೋಗಿಗಳ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು ಎಂದರು.
ತಾಲೂಕು ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕಿಯರಾದ ಡೈಸಿ, ಜೀರೊ, ಕ್ರಿಸ್ಟಲ್‌ಜೇಮ್ಸ್, ಶಿಲ್ಪಾ ಮತ್ತು ಮಂಜುನಾಥ್, ಪ್ರಭು ಅವರನ್ನು ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್‌ನಿಂದ ಸನ್ಮಾನಿಸಿ ಗೌರವಿಸಲಾಯಿತು. ಎನ್.ಆರ್.ಪುರ ಘಟಕದ ಅಧ್ಯಕ್ಷ ಕೃಪಾಲ ಗೌಡ, ಖಜಾಂಚಿ ದಕ್ಷಿಣಮೂರ್ತಿ, ಕಾರ್ಯದರ್ಶಿ ಸೋಮಶೇಖರ್. ವಿದ್ಯಾನಂದ್, ಕೃಷ್ಣಮೂರ್ತಿ, ದೀಪ್ತಿ, ಜೀನು,ಪಿ.ಪಿ.ಬೇಬಿ ಇದ್ದರು.