ಬಾಳೆಹೊನ್ನೂರಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಕೆ.ಎನ್.ಪ್ರಸನ್ನ ಅವರನ್ನು ಸನ್ಮಾನಿಸಲಾಯಿತು.
ಬಾಳೆಹೊನ್ನೂರು: ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿ ತ್ಯಾಗ, ಬಲಿದಾನ ಮಾಡಿದ ವೀರ ಯೋಧರನ್ನು ಭಾರತೀಯರು ಮರೆಯಲು ಸಾಧ್ಯವಿಲ್ಲ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಂ.ಯೋಗೀಶ್‌ಗೌಡ ಹೇಳಿದರು.
ಲಯನ್ಸ್ ಕ್ಲಬ್ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಿ ಮಾತನಾಡಿ, ಕಾರ್ಗಿಲ್ ಯುದ್ಧದ ಸಮಯದಲ್ಲಿ ಭಾರತೀಯ ಯೋಧರು ತೋರಿದ ಧೈರ್ಯ, ಶಿಸ್ತು, ಶ್ರದ್ಧೆ ಅಪಾರ. ಇದು ಪ್ರತಿಯೊಬ್ಬ ಭಾರತೀಯರಿಗೂ ಮಾದರಿ. ಭಾರತೀಯ ಯೋಧರ ಶ್ರಮದಿಂದ ನಾವು ಇಂದು ಹೆಮ್ಮೆಯಿಂದ ಕಾರ್ಗಿಲ್ ವಿಜಯ ದಿನ ಆಚರಿಸುವಂತಾಗಿದೆ. ದೇಶದ ಯೋಧರ ಬಗ್ಗೆ ಪ್ರತಿಯೊಬ್ಬರು ಗೌರವ, ಹೆಮ್ಮೆ ಪಡಬೇಕಿದೆ ಎಂದರು.
ನಿವೃತ್ತ ಯೋಧ ಕೆ.ಎನ್.ಪ್ರಸನ್ನ ಮಾತನಾಡಿ, ಭಾರತೀಯ ಸೇನೆಯು ವಿಶ್ವದಲ್ಲಿ ಶ್ರೇಷ್ಠ, ಉತ್ತಮ ಸೇನೆಯಾಗಿದ್ದು, ಭಾರತದ ಮೇಲೆ ಹಲವಾರು ದಾಳಿಗಳು ನಡೆದರೂ ಸಹ ನಮ್ಮ ಸೇನೆ ಅವುಗಳನ್ನು ಸಮರ್ಥವಾಗಿ ಎದುರಿಸಿ ದೇಶ ಕಾಪಾಡಿಕೊಂಡಿದೆ. ಭಾರತೀಯ ಸೇನೆ ದೇಶಕ್ಕಾಗಿ ಹಗಲಿರುಳು ತನ್ನ ಸಮಯ ಮೀಸಲಿಟ್ಟಿದೆ ಎಂದರು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಮಂಜುನಾಥ್ ತುಪ್ಪೂರು ಮಾತನಾಡಿ, ಇಂದಿನ ಯುವಜನರು ದೇಶ ಕಾಯುವ ಯೋಧರು, ದೇಶಕ್ಕೆ ಅನ್ನ ನೀಡುವ ರೈತರನ್ನು ಗೌರವಿಸುವುದು ಬಿಟ್ಟು ಸಿನಿಮಾ ನಟರು, ಕ್ರಿಕೆಟ್ ಆಟಗಾರರನ್ನು ಆರಾಧಿಸುತ್ತಿರುವುದು ದುರದೃಷ್ಟಕರ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ಗೌರವ ನೀಡಬೇಕು.ದೇಶಕ್ಕಾಗಿ ಸೇವೆ ಸಲ್ಲಿಸುವ ಯೋಧರು ತಪ್ಪು ಮಾಡಲು ಸಾಧ್ಯವಿಲ್ಲ. ಅವರಲ್ಲಿ ಸಂಪೂರ್ಣ ದೇಶ ಪ್ರೇಮ ಅಡಗಿರುತ್ತದೆ. ಯುವಜನರು ಸೇನೆಗೆ ಸೇರಲು ಹೆಚ್ಚು ಆಸಕ್ತಿ ವಹಿಸಬೇಕು ಎಂದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಎ.ಸಿ.ಕೃಷ್ಣಮೂರ್ತಿ, ಖಜಾಂಚಿ ಮಧುಕುಮಾರ್, ಪ್ರಾಂತೀಯ ಅಧ್ಯಕ್ಷ ಎಂ.ಡಿ.ಶಿವರಾಮ್, ವಲಯಾಧ್ಯಕ್ಷ ಎಂ.ವಿ.ಶ್ರೀನಿವಾಸಗೌಡ, ಪೂರ್ವಾಧ್ಯಕ್ಷ ಕೆ.ಜಯಪ್ರಕಾಶ್, ಸದಸ್ಯರಾದ ಎಂ.ನಾರಾಯಣ, ಶರತ್‌ಕುಮಾರ್, ಕೆ.ನಾರಾಯಣಶೆಟ್ಟಿ, ಉಪೇಂದ್ರ, ವಿಜಯ್, ವಿಜೇಂದ್ರ, ರತೀಶ್ ಮತ್ತಿತರರು ಹಾಜರಿದ್ದರು.