ಚಾರ್ಮಾಡಿ ಘಾಟಿಯ ಬಿದಿರುತಳ ಬಸ್‌ ನಿಲ್ದಾಣದ ಬಳಿ ಎತ್ತರದ ಗುಡ್ಡದಿಂದ ಜರಿದಿರುವ ಕಲ್ಲು ಬಂಡೆಗಳು 
ಚಿಕ್ಕಮಗಳೂರು

ಚಾರ್ಮಾಡಿ ಘಾಟಿಯಲ್ಲಿ ಜರಿದಿರುವ ಕಲ್ಲುಗಳು

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಕನ್ನಡ ಮತ್ತು ಕಾಫಿನಾಡನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿ
  • ಬಿದಿರುತಳ ಬಸ್ ನಿಲ್ದಾಣದ ಬಳಿಯ ರಸ್ತೆ ಪಕ್ಕದ ಎತ್ತರದ ಗುಡ್ಡದಿಂದ ಸಣ್ಣ ಪ್ರಮಾಣದಲ್ಲಿ ಕಲ್ಲುಗಳು ಜರಿದಿವೆ
ಚಿಕ್ಕಮಗಳೂರು: ದಕ್ಷಿಣ ಕನ್ನಡ ಮತ್ತು ಕಾಫಿನಾಡನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯ ಬಿದಿರುತಳ ಬಸ್ ನಿಲ್ದಾಣದ ಬಳಿಯ ರಸ್ತೆ ಪಕ್ಕದ ಎತ್ತರದ ಗುಡ್ಡದಿಂದ ಸಣ್ಣ ಪ್ರಮಾಣದಲ್ಲಿ ಕಲ್ಲುಗಳು ಜರಿದಿವೆ.
ಕಳೆದ ಒಂದು ತಿಂಗಳಿನಿಂದ ಮಲೆನಾಡು ಭಾಗದಲ್ಲಿ ಮುಂಗಾರು ಪೂರ್ವ ಮಳೆ ನಿರಂತರವಾಗಿ ಸುರಿದ ಪರಿಣಾಮ ಭೂಮಿಯ ತೇವಾಂಶ ಹೆಚ್ಚಾದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ವಾಹನಗಳಿಗೆ ಹಾನಿಯಾಗಿಲ್ಲ ಹಾಗೂ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿಲ್ಲ.
ಇದೀಗಷ್ಟೇ ಮುಂಗಾರು ಮಳೆಗಾಲ ಆರಂಭಗೊಂಡಿದ್ದು, ಇನ್ನೂ ಮೂರು ತಿಂಗಳ ಕಾಲ ಮಳೆ ಆರ್ಭಟಿಸುವ ಸಂದರ್ಭದಲ್ಲಿ ಚಾರ್ಮಾಡಿ ಘಾಟ್ ಸೇರಿದಂತೆ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಹಾಗೂ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಎರಡು ದಿನಗಳ ಹಿಂದಷ್ಟೇ ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್‌ ಸಿಂಗ್‌ ಮೀನಾ ಚಾರ್ಮಾಡಿ ಘಾಟ್ ನ ಸಂಭವನೀಯ ಭೂಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಅದರ ಬೆನ್ನಲ್ಲೇ ಇದೀಗ ಸಣ್ಣ ಪ್ರಮಾಣದಲ್ಲಿ ಕಲ್ಲುಗಳು ಜರಿದಿರುವುದು ಆತಂಕಕ್ಕೆ ಕಾರಣವಾಗಿದೆ.
ಮಳೆಗಾಲದಲ್ಲಿ ಚಾರ್ಮಾಡಿ ಘಾಟ್ ಮೂಲಕ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಪ್ರಯಾಣಿಸಬೇಕಿದೆ.