ಗುಂಡಿಗಳಿಂದ ತುಂಬಿರುವ ಕಳಸ-ಹೊರನಾಡು ರಸ್ತೆ. 
ಚಿಕ್ಕಮಗಳೂರು

ಇಲ್ಲಿನ ಪ್ರವಾಸಿ ಕೇಂದ್ರಗಳಿಗೆ ರಸ್ತೆಗಳೇ ಕಪ್ಪು ಚುಕ್ಕೆ

ಕಳಸ: ತಾಲೂಕಿನ ಮುಖ್ಯರಸ್ತೆಗಳು ಸೇರಿದಂತೆ ಗ್ರಾಮೀಣ ಮಾರ್ಗದ ಎಲ್ಲ ರಸ್ತೆಗಳೂ ಗುಂಡಿಮಯವಾಗಿ ಬದಲಾಗಿರುವುದರಿಂದ ವಾಹನ ಸವಾರರು, ಗ್ರಾಮಸ್ಥರು ಹಾಗೂ ಇಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ನರಕಯಾತನೆ ಅನುಭವಿಸುವಂತಾಗಿದೆ.
ತಾಲೂಕಿನ ಮುಖ್ಯ ರಸ್ತೆಗಳಾದ ಕುದುರೆಮುಖ, ಕೊಟ್ಟಿಗೆಹಾರ, ಬಾಳೆಹೊನ್ನೂರು, ಹೊರನಾಡು ರಸ್ತೆಗಳು ಸಂಪೂರ್ಣ ಗುಂಡಿಯಲ್ಲಿವೆ. ಗ್ರಾಮೀಣ ಭಾಗದ ರಸ್ಥೆಗಳ ಸ್ಥಿತಿಯನ್ನು ಕೇಳುವುದೇ ಬೇಡ ಎನ್ನುವ ಸ್ಥಿತಿ ಇದೆ. ಕಳಸಕ್ಕೆ ಯಾವ ಕಡೆಯಿಂದ ಬರಬೇಕಾದರೂ ಅಥವಾ ಎಲ್ಲಿಗೆ ಹೋಗಬೇಕಾದರೂ ಯಮಸ್ವರೂಪಿ ಗುಂಡಿಗಳನ್ನು ದಾಟಿಯೇ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳಸ ಪ್ರವಾಸೋದ್ಯಮಕ್ಕೆ ಪ್ರಸಿದ್ಧವಾಗಿದೆ. ಧಾರ್ಮಿಕ ಕೇಂದ್ರಗಳಾದ ಕಲಶೇಶ್ವರ ದೇವಸ್ಥಾನ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಹಾಗೂ ನಿಸರ್ಗವನ್ನು ತನ್ನೊಡಲಿನೊಳಗೆ ಕಟ್ಟಿಕೊಂಡಿರುವಂತ ಕ್ಯಾತನಮಕ್ಕಿ, ಮೈದಾಡಿ, ಕುದುರೆಮುಖ, ನೇತ್ರಾವತಿ ಪೀಕ್, ಕುರುಂಜಲ್ ಗುಡ್ಡ, ಅನೇಕ ಜಲಪಾತಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ವಾರಾಂತ್ಯದಲ್ಲಿ ಪ್ರವಾಸಿಗರಿಂದ ತುಂಬಿರುತ್ತವೆ. ಆದರೆ ಇಲ್ಲಿಯ ರಸ್ತೆ ಮಾತ್ರ ಇಲ್ಲಿಯ ಪ್ರಕೃತಿಗೆ ಕಪ್ಪು ಚುಕ್ಕೆಯಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಇಲ್ಲಿಯ ರಸ್ತೆಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಂದೆಡೆ ಅಭಿವೃದ್ಧಿ ಪರ್ವದ ಮಾತುಗಳು ಕೇಳಿಸುತ್ತಿದ್ದರೆ, ಇನ್ನೊಂದೆಡೆ ಮೂಲಸೌಕರ್ಯಗಳಲ್ಲಿ ಒಂದಾದ ರಸ್ತೆಯೇ ಸರಿ ಇಲ್ಲದಿರುವುದು ಜನರಲ್ಲಿ ಅಸಮಾಧಾನ ಮೂಡಿಸುತ್ತಿದೆ. ಗುಂಡಿಮಯ ರಸ್ತೆಯಲ್ಲಿ ಸಂಚರಿಸುವುದರಿಂದ ವಾಹನಗಳಿಗೆ ಹಾನಿಯಾಗುವುದು, ಗುಂಡಿ ತಪ್ಪಿಸಲು ಹೋಗಿ ತಕ್ಷಣ ಬ್ರೇಕ್ ಹಾಕುವುದರಿಂದ ಅವಘಡಗಳು ಸಂಭವಿಸುತ್ತಿರುತ್ತವೆ. ಮಳೆ ಬಂದಾಗ ನೀರು ಸಂಗ್ರಹವಾಗಿ ರಸ್ತೆ ಕಾಣದ ಮಟ್ಟಿಗೆ ಹಾಳಾಗಿವೆ.
ರಸ್ತೆ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಬಿಡುಗಡೆಯಾಗುತ್ತದೆ ಎಂಬ ಘೋಷಣೆಗಳು ವರ್ಷದಿಂದ ವರ್ಷಕ್ಕೆ ಕೇಳಿ ಬರುತ್ತಿದ್ದರೂ ಕಾರ್ಯರೂಪಕ್ಕೆ ಬರುವುದು ವಿಳಂಬವಾಗುತ್ತಿದೆ. ಗುತ್ತಿಗೆದಾರರ ನಿರ್ಲಕ್ಷ್ಯ, ಗುಣಮಟ್ಟದ ಕೊರತೆ, ಮೇಲ್ವಿಚಾರಣೆ ಅಭಾವ ಈ ಎಲ್ಲವೂ ಸೇರಿ ರಸ್ತೆ ನಿರ್ಮಾಣವಾದ ಕೆಲವು ತಿಂಗಳಲ್ಲಿ ಮತ್ತೆ ಗುಂಡಿಗಳು ಬೀಳುವಂತಾಗುತ್ತದೆ. ರಸ್ತೆ ಸಾರಿಗೆ ವ್ಯವಸ್ಥೆಯೇ ಸುಗಮವಾಗದಿದ್ದರೆ ಗ್ರಾಮಗಳ ಆರ್ಥಿಕ ಸುಧಾರಣೆ ಹೇಗೆ ಸಾಧ್ಯ? ಕೃಷಿ ಉತ್ಪನ್ನಗಳ ಸಾಗಣೆ, ರೋಗಿಗಳನ್ನು ಕರೆದೊಯ್ಯುವುದು, ವಿದ್ಯಾರ್ಥಿಗಳ ಶಾಲಾ, ಕಾಲೇಜು ಪ್ರಯಾಣ ಎಲ್ಲವೂ ಇದೇ ರಸ್ತೆಗಳ ಮೇಲೆ ಅವಲಂಬಿಸಿದೆ.

ನನ್ನ ಅವಧಿಯ ಎರಡೂವರೆ ವರ್ಷದಲ್ಲಿ ಕಳಸ ತಾಲೂಕಿಗೆ ಸೇತುವೆ, ರಸ್ತೆಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ತರಲಾಗಿದೆ. ಕೆಲವು ಕಾಮಗಾರಿಗಳು ಪೂರ್ಣವಾಗಿವೆ. ಕೆಲವೊಂದು ಪ್ರಗತಿಯಲ್ಲಿವೆ. ಮಳೆಯಿಂದ ಕೆಲವು ಕಾಮಗಾರಿಗೆ ತಡೆಯಾಗಿತ್ತು. ಹೆಚ್ಚಿನ ಗ್ರಾಮೀಣ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡಲಾಗಿದೆ. ಇನ್ನೂ ಹೆಚ್ಚಿನ ಅನುದಾನಗಳನ್ನು ತಂದು ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು.

— ನಯನಾ ಮೋಟಮ್ಮ ಶಾಸಕಿ


ಒಂದೆಡೆ ಗುಡಿಬಿದ್ದ ರಸ್ತೆಗಳಾದರೆ ಇನ್ನೊಂದುಕಡೆ ಕೋಟ್ಯಾಂತರ ರೂಪಾಯಿ ಅನುದಾನದ ರಸ್ತೆ ಕಾಮಗಾರಿಗಳು ಪ್ರಾರಂಭವಾಗಿ ಹೊಸ ರಸ್ತೆಯ ಭರವಸೆ ಕಾಣುತ್ತಿದೆ. ಕುದುರೆಮುಖ ರಸ್ತೆ, ಕಳಸ ದೇವಸ್ಥಾನದ ಸಮೀಪ ಮುಖ್ಯರಸ್ತೆಗಳ ಕಾಮಗಾರಿ ಆರಂಭವಾಗಿದೆ. ಕೆಲವೆಡೆ ಗ್ರಾಮೀಣ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ನಿರ್ಮಾಣವಾಗುತ್ತಿವೆ.