ರೂಪ್‌ಲೈನ್ ಗ್ರಾಮದಿಂದ ಲಾಲ್‌ಬಾಗ್‌ವರೆಗಿನ ರಸ್ತೆಯಲ್ಲಿ ಗುಂಡಿಗಳುಬಿದ್ದಿರುವುದು.
- ನಂದಿಗಾವೆ ಸುತ್ತಮುತ್ತಲಿನ ಗ್ರಾಮಗಳ ಸ್ಥಿತಿ ಶೋಚನೀಯ
- ಗುಂಡಿಬಿದ್ದ ರಸ್ತೆ, ನೆಟ್‌ವರ್ಕ್ ಇಲ್ಲದ ಸ್ಥಿತಿ
ಲಿಂಗದಹಳ್ಳಿ: ಕಾಡಂಚಿನ ಗ್ರಾಮಗಳ ಜನರ ಬದುಕು ಅಷ್ಟು ಸುಲಭವಲ್ಲ ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ. ತರೀಕೆರೆ, ಚಿಕ್ಕಮಗಳೂರು, ಶೃಂಗೇರಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಗುಂಡಿಬಿದ್ದ ರಸ್ತೆಯಲ್ಲಿ ಸಂಚಾರ, ಗುಡ್ಡ ಏರಿ ಮೊಬೈಲ್‌ನಲ್ಲಿ ಸಂಭಾಷಣೆ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳು 150ಕ್ಕೂ ಹೆಚ್ಚು ಕಿಮೀ ಸುತ್ತುವರಿದು ಸಂಚರಿಸುವ ಜನರ ಸಮಸ್ಯೆಗೆ ಪರಿಹಾರವೇ ಇಲ್ಲವೇನೋ ಎಂಬಂತಾಗಿದೆ.
ಇಂಥ ಸ್ಥಿತಿ ಇರುವುದು ನಂದಿಗಾವೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ. ರೂಪ್‌ಲೈನ್ ಗ್ರಾಮದಿಂದ ಲಾಲ್‌ಬಾಗ್‌ವರೆಗಿನ ಪಿಡಬ್ಲುೃಡಿ 15 ಕಿ.ಮೀ ರಸ್ತೆ ಅಭಿವೃದ್ಧಿ ಕಾಣದೆ ಹತ್ತಾರು ವರ್ಷಗಳೇ ಕಳೆದಿವೆ. ಈ ರಸ್ತೆಯಲ್ಲಿರುವ ದೂಪದಖಾನ್, ದಂಡು ಬಿಡಾರ, ನಂದಿಗಾವೆ ಗ್ರಾಮಗಳು ಮತ್ತು ಹತ್ತಾರು ಕಾಫಿ ತೋಟಗಳ ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರು ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗಿದೆ. ಮಳೆಗಾಲದಲ್ಲಂತೂ ಕೆಸರಿನ ಗದ್ದೆಯಂತಾಗುವ ಈ ರಸ್ತೆಯಲ್ಲಿ ನಡೆದು ಹೋಗುವುದು ಅಸಾಧ್ಯ.
ಸದ್ಯ ದೂಪದಖಾನ್‌ವರೆಗೆ ಬಸ್‌ಗಳು ಸಂಚರಿಸುತ್ತಿದ್ದು, ಈ ಗ್ರಾಮದಿಂದ ಮುಂದೆ 25 ಕಿಮೀ ದೂರದಲ್ಲಿರುವ ನಂದಿಗಾವೆ ಗ್ರಾಮದವರೆಗಿನ ಎಲ್ಲ ನಿವಾಸಿಗಳು ಸ್ವಂತ ವಾಹನದಲ್ಲಿ ಹೋಗಬೇಕು. ಇಲ್ಲದಿದ್ದರೆ ಗ್ರಾಮಗಳವರೆಗೆ ನಡೆದು ಹೋಗಬೇಕಾಗಿದೆ. ಗ್ರಾಮಸ್ಥರು ಯಾವುದೇ ಸಾಮಗ್ರಿಗಳನ್ನು ತರಬೇಕೆಂದರೂ 20-25 ಕಿ.ಮೀ ದೂರದಲ್ಲಿರುವ ಕಲ್ಲತ್ತಿಪುರ ಸಂತೆಗೆ ಹೋಗಬೇಕಾಗಿದೆ.
ಈ ಭಾಗದ ಗ್ರಾಮಗಳು ಭದ್ರಾ ಅಭಯಾರಣ್ಯದ ಹುಲಿ ಸಂರಕ್ಷಿತ ಪ್ರದೇಶದ ಸೆರಗಿನಲ್ಲೇ ಇರುವುದರಿಂದ ಕಾಡು ಪ್ರಾಣಿಗಳು ಹಗಲಿನಲ್ಲೇ ರಸ್ತೆಯಲ್ಲಿ ಸಂಚರಿಸುತ್ತಿರುತ್ತವೆ. ಇಂಥ ಪ್ರದೇಶದಲ್ಲಿ ಜನರು ನಡೆದು ಹೋಗಬೇಕಾಗಿದೆ. ಈ ಭಾಗದ ಗ್ರಾಮಗಳು ಬೆಟ್ಟ, ಗುಡ್ಡಗಳ ವ್ಯಾಪ್ತಿಯಲ್ಲಿದ್ದು ಹತ್ತಾರು ಕಿ.ಮೀ ದೂರದಲ್ಲಿರುವ ರಂಗೇನಹಳ್ಳಿ, ಲಕ್ಕವಳ್ಳಿ, ಶಂಕರಘಟ್ಟ, ತಣಿಗೆಬೈಲು ಭಾಗದಲ್ಲಿರುವ ಮೊಬೈಲ್ ಟವರ್‌ಗಳನ್ನೇ ಅವಲಂಬಿಸಿದ್ದು, ಮೊಬೈಲ್ ಸಿಗ್ನಲ್‌ಗಾಗಿ ಬೆಟ್ಟದ ಮೇಲೆ, ಇಲ್ಲವೇ ಮರಗಳ ಮೇಲೆ ಏರಿ ಮಾತನಾಡಬೇಕಾದ ಸ್ಥಿತಿ ಇದೆ. ಮಳೆಗಾಲದಲ್ಲಿ ತಿಂಗಳಾನುಗಟ್ಟಲೆ ಹೊರ ಜಗತ್ತಿನ ಸಂಪರ್ಕದಿಂದ ದೂರ ಉಳಿಯುವಂತಾಗಿದೆ ಎಂದು ನಂದಿಗಾವೆ ಗ್ರಾಮದ ವೆಂಕಟೇಶ್ ಎಂಬುವವರು ಅಳಲು ತೋಡಿಕೊಂಡಿದ್ದಾರೆ.
ದಂಡು ಬಿಡಾರ ಮತ್ತು ನಂದಿಗಾವೆ ಗ್ರಾಮಗಳು ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಗ್ರಾಮಗಳಾಗಿದ್ದು, ಎನ್.ಆರ್.ಪುರ ತಾಲೂಕಿನ ಭದ್ರಾ ಹಿನ್ನೀರಿನ ಪ್ರದೇಶದಲ್ಲಿವೆ. ಗ್ರಾಮ ಪಂಚಾಯಿತಿ ಕೆಲಸಗಳಿಗೆ, ತಾಲೂಕು ಕಚೇರಿ, ಪೊಲೀಸ್ ಠಾಣೆ, ಪಡಿತರ ಚೀಟಿ ಪಡೆಯಲು ಸೇರಿದಂತೆ ಯಾವುದೇ ಕೆಲಸಕ್ಕೆ ಲಿಂಗದಹಳ್ಳಿ, ತರೀಕೆರೆ, ಲಕ್ಕವಳ್ಳಿ ಮಾರ್ಗವಾಗಿ 150 ಕಿ.ಮೀ ದೂರದಲ್ಲಿರುವ ಎನ್.ಆರ್.ಪುರಕ್ಕೆ ಹೋಗಬೇಕು. ಆದ್ದರಿಂದ ದಂಡು ಬಿಡಾರ ಮತ್ತು ನಂದಿಗಾವೆ ಗ್ರಾಮಗಳನ್ನು ತರೀಕೆರೆ ತಾಲೂಕಿಗೆ ಸೇರಿಸಬೇಕೆಂಬುದು ಗ್ರಾಮಸ್ಥರ ಒತ್ತಾಯ.
ಚುನಾವಣೆ ಸಂದರ್ಭಗಳಲಷ್ಟೇ ಈ ಗ್ರಾಮಗಳಿಗೆ ಬರುವ ರಾಜಕಾರಣಿಗಳು, ಗ್ರಾಮಗಳನ್ನು ಅಭಿವೃದ್ಧಿ ಪಡಿಸುವುದಾಗಿ ಭರವಸೆ ನೀಡಿ ಹೋದವರು ಮತ್ತೆ ಬರುವುದಿಲ್ಲ. ಇಂಥ ಸ್ಥಿತಿ ಬದಲಾಯಿಸಲು ನಂದಿಗಾವೆ, ದಂಡು ಬಿಡಾರ ಗ್ರಾಮಸ್ಥರು ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದ್ದರಿಂದ ಎಚ್ಚೆತ್ತ ತಾಲೂಕು ಆಡಳಿತದ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿದ್ದರು. ಚುನಾವಣೆ ನಂತರ ಸಾಧ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿ ಹೋದರು. ಇಂದಿನವರೆಗೂ ಭರವಸೆಯಾಗೇ ಉಳಿದಿದೆ.
ಕಲ್ಲತ್ತಿಪುರ ಲಾಲ್‌ಬಾಗ್ ರಸ್ತೆ ತರೀಕೆರೆ, ಶೃಂಗೇರಿ ಮತ್ತು ಚಿಕ್ಕಮಗಳೂರು ತಾಲೂಕುಗಳಿಗೆ ಸಂಪರ್ಕ ಕಲ್ಪಿಸುತ್ತದೆ. ರೂಪ್‌ಲೈನ್ ಗ್ರಾಮದಿಂದ ದೂಪದ ಖಾನ್ ಮಾರ್ಗವಾಗಿ ಮಸ್ಕಲ್ ಮರಡಿಯವರೆಗೆ ತರೀಕೆರೆ ತಾಲೂಕಿಗೆ ಸೇರುತ್ತದೆ. ಮಸ್ಕಲ್ ಮರಡಿಯಿಂದ ಮುಂದೆ ದಂಡು ಬಿಡಾರ ಮಾರ್ಗವಾಗಿ ನಂದಿಗಾವೆ ಗ್ರಾಮದವರೆಗೆ ಎನ್.ಆರ್.ಪುರ ತಾಲೂಕಿನ ಪ್ರದೇಶವಾಗಿದೆ. ದೂಪದಖಾನ್ ಗ್ರಾಮದಿಂದ ದೊಡ್ಡ ಜಿಗಣೆಖಾನ್, ಸಣ್ಣ ಜಿಗಣೆಖಾನ್, ಬೇಬಿಬಾಗ್, ಕಟ್ಟೆಹೊಳೆ, ಹೆಬ್ಬೆ ಜಲಪಾತದ ಭಾಗದಲ್ಲಿರುವ ಕಾಫಿ ತೋಟಗಳು ಚಿಕ್ಕಮಗಳೂರು ತಾಲೂಕಿಗೆ ಸೇರಿದ್ದು, ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಅವರ ಮತಕ್ಷೇತ್ರಗಳ ವ್ಯಾಪ್ತಿಗೆ ಸೇರಿದ್ದರೂ ಯಾವ ಶಾಸಕರೂ ಈ ಗ್ರಾಮಗಳಿಗೆ ರಸ್ತೆ ಮುಂತಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ.