ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಪೌರ್ಣಿಮೆ ಧರ್ಮ ಸಮಾರಂಭದಲ್ಲಿ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳಿಗೆ ವಿವಿಧ ಮಠಾಧೀಶರು ಗೌರವ ಸಮರ್ಪಿಸಿದರು.
ಬಾಳೆಹೊನ್ನೂರು: ಮನುಷ್ಯ ಜೀವನದಲ್ಲಿ ಆಸೆಗಳಿಗಾಗಿ ಬದುಕಬಾರದು. ಆದರ್ಶಗಳಿಗಾಗಿ ಬದುಕಬೇಕು. ಜೀವನದಲ್ಲಿ ಗುರಿಯಿರಬೇಕೇ ಹೊರತು ಮತ್ತೊಬ್ಬರ ಬಗ್ಗೆ ದ್ವೇಷ ಇರಬಾರದು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ರಂಭಾಪುರಿ ಪೀಠದಲ್ಲಿ ಸೋಮವಾರ ಪೌರ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಮಾಡಿದ ಸಹಾಯ, ಗಳಿಸಿದ ವಿಶ್ವಾಸ, ಬೆಳೆಸಿದ ಸ್ನೇಹ, ಹಂಚಿದ ಪ್ರೀತಿ ಹಾಗೂ ಉಳಿಸಿಕೊಂಡ ನಂಬಿಕೆ ಕೊನೆಯವರೆಗೆ ಇರುತ್ತದೆ. ಗಿಡದಲ್ಲಿ ಎಷ್ಟೇ ಮುಳ್ಳುಗಳು ಇದ್ದರೂ ಹೂವು ಅರಳುತ್ತವೆ. ಹಾಗೆಯೇ ನಮ್ಮ ಮನಸ್ಸಿನಲ್ಲಿ ಎಷ್ಟೋ ನೋವುಗಳು ತುಂಬಿದ್ದರೂ ಮುಖದಲ್ಲಿ ಯಾವಾಗಲೂ ನಗು ತುಂಬಿರಬೇಕು ಎಂದರು.
ಸತ್ಯ, ನಿಸ್ವಾರ್ಥ ಮತ್ತು ಆಂತರಿಕ ಪರಿಶುದ್ಧತೆ ಈ ಮೂರು ಶ್ರೇಷ್ಠ ಗುಣಗಳು ಯಾರಲ್ಲಿವೆಯೋ ಅಂಥವರನ್ನು ಯಾವ ಶಕ್ತಿಯೂ ಅಲುಗಾಡಿಸಲಾಗದು. ವೀರಶೈವ ಧರ್ಮ ಸಂಹಿತೆಯಲ್ಲಿ ಸಕಲರಿಗೂ ಒಳಿತನ್ನೇ ಬಯಸುತ್ತ ಬಂದಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ-ಸಿದ್ಧಾಂತಗಳು ಸಕಲರ ಬದುಕಿನಲ್ಲಿ ಹೊಸ ಶಕ್ತಿ ತುಂಬಿ ತರುತ್ತವೆ. ಸಕಲರ ಶ್ರೇಯೋಭಿವೃದ್ಧಿಗೆ ಧರ್ಮ ಮತ್ತು ಧರ್ಮಾಚರಣೆ ಅವಶ್ಯಕ ಎಂದರು.
ಸಮಾರಂಭದಲ್ಲಿ ರಾಜೇಶ್ವರ ಶ್ರೀಗಳು, ಹಳ್ಳಿಖೇರ ಶ್ರೀಪತಿ ಪಂಡಿತಾರಾಧ್ಯ ಶ್ರೀ, ರಾಚೋಟೇಶ್ವರ ಶ್ರೀ, ಬೀರೂರು ರುದ್ರಮುನಿ ಶ್ರೀ, ಹುಡುಗಿ ವಿರಕ್ತಮಠದ ಚನ್ನಮಲ್ಲ ಶ್ರೀ, ಹುಡುಗಿ ಹಿರೇಮಠದ ಸೋಮೇಶ್ವರ ಶ್ರೀ, ಮಹಾರಾಷ್ಟ್ರದ ವಿರೂಪಾಕ್ಷ ಶ್ರೀ, ಕಂಠಾಣ ಕಾಶೀನಾಥ ಶ್ರೀ, ಮಾವನೂರು ಶ್ರೀ ಪಾಲ್ಗೊಂಡಿದ್ದರು. ಪೌರ್ಣಿಮೆ ಅಂಗವಾಗಿ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.