ಚಿಕ್ಕಮಗಳೂರು ತಾಲೂಕಿನ ಸೀತಾಳಯ್ಯನ ಗಿರಿ ಪ್ಲಾಸ್ಟಿಕ್ ಮಯವಾಗಿರುವುದು.
ಚಿಕ್ಕಮಗಳೂರು: ಪುರಾಣ ಪ್ರಸಿದ್ಧ, ಧಾರ್ಮಿಕ ಹಾಗೂ ಪರಿಸರದ ದೃಷ್ಟಿಯಿಂದ ಮಹತ್ವ ಪಡೆದಿರುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಪ್ರದೇಶ ಪ್ರವಾಸಿಗರ ಅತಿಯಾದ ಹಾವಳಿಯಿಂದ ತ್ಯಾಜ್ಯಮಯವಾಗುತ್ತಿದ್ದು, ಪ್ಲಾಸ್ಟಿಕ್ ಮಾಲಿನ್ಯದಿಂದ ಗಿರಿ ಪ್ರದೇಶದ ನೈಸರ್ಗಿಕ ಸೌಂದರ್ಯಕ್ಕೆ ಧಕ್ಕೆ ಉಂಟಾಗಿದೆ. ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಆಗಮಿಸಿದ ಪರಿಣಾಮ ದೇವಸ್ಥಾನದ ಆವರಣ ಸೇರಿದಂತೆ ಸುತ್ತಮುತ್ತ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್‌ಗಳು, ನೀರಿನ ಬಾಟಲಿಗಳು ಹಾಗೂ ಇತರ ತ್ಯಾಜ್ಯ ಬಿದ್ದಿರುವುದು ಕಂಡುಬಂದಿದೆ.
ಜಿಲ್ಲಾಡಳಿತ ಗಿರಿ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದರೂ, ಪರಿಣಾಮಕಾರಿ ತಪಾಸಣೆ ಹಾಗೂ ನಿಯಂತ್ರಣದ ಕೊರತೆಯಿಂದ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮುಂದುವರಿದಿದೆ. ಪ್ರವಾಸಿಗರು ಬಳಸಿದ ನೀರಿನ ಬಾಟಲಿ, ತಿಂಡಿ-ತಿನಿಸುಗಳ ಪ್ಯಾಕೆಟ್‌ಗಳು ಹಾಗೂ ಪ್ಲಾಸ್ಟಿಕ್ ಕವರ್‌ಗಳನ್ನು ಮನಸೋಇಚ್ಛೆ ಎಸೆಯುತ್ತಿರುವುದರಿಂದ ಗಿರಿ ಪ್ರದೇಶದ ಪರಿಸರಕ್ಕೆ ಗಂಭೀರ ಅಪಾಯ ಎದುರಾಗಿದೆ.
ಧಾರ್ಮಿಕವಾಗಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಡುವ ಸೀತಾಳಯ್ಯನಗಿರಿ ಪ್ರದೇಶದಲ್ಲಿ ಭಕ್ತರು ಗಂಗೆ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುತ್ತಾರೆ. ಆದರೆ ಇದೇ ಪ್ರದೇಶದಲ್ಲಿ ಕಸದ ರಾಶಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡಿರುವುದು ಭಕ್ತರ ಅಸಮಾಧಾನಕ್ಕೂ ಕಾರಣವಾಗಿದೆ. ಕಸದ ಬುಟ್ಟಿಗಳು ಭರ್ತಿಯಾಗಿದ್ದು, ಸುತ್ತಮುತ್ತ ದುರ್ನಾತ ಬೀರುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಪ್ರದೇಶದ ಶೋಲಾ ಕಾಡುಗಳಲ್ಲಿ ಹುಟ್ಟುವ ಜಲಮೂಲಗಳು, ಝರಿಗಳು ಹಾಗೂ ಸಣ್ಣ ನೀರಿನ ಹರಿವುಗಳಿಗೂ ಪ್ಲಾಸ್ಟಿಕ್ ತ್ಯಾಜ್ಯ ಅಪಾಯಕಾರಿಯಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ಮಣ್ಣಿನಲ್ಲಿ ಕೊಳೆಯದೆ ಉಳಿಯುವುದರಿಂದ ಪರಿಸರ ವ್ಯವಸ್ಥೆಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರುವ ಸಾಧ್ಯತೆಯಿದೆ.
ಇನ್ನೊಂದೆಡೆ ಪ್ರವಾಸಿಗರು ತಿಂದು ಬಿಸಾಡುವ ತಿಂಡಿ-ತಿನಿಸುಗಳ ಪ್ಲಾಸ್ಟಿಕ್ ಕವರ್‌ಗಳ ಸಮೇತ ಆಹಾರವನ್ನು ಜಾನುವಾರುಗಳು ತಿನ್ನುತ್ತಿರುವ ದೃಶ್ಯಗಳು ಆತಂಕ ಮೂಡಿಸುತ್ತಿವೆ. ಹೀಗೆ ಪ್ಲಾಸ್ಟಿಕ್ ಜಾನುವಾರುಗಳ ಹೊಟ್ಟೆ ಸೇರುತ್ತಿದ್ದು, ಅವುಗಳ ಜೀವಕ್ಕೂ ಅಪಾಯ ಎದುರಾಗಿದೆ. ಇದೇ ರೀತಿ ಅರಣ್ಯ ಪ್ರದೇಶದಲ್ಲಿರುವ ವನ್ಯಜೀವಿಗಳೂ ಪ್ಲಾಸ್ಟಿಕ್ ತ್ಯಾಜ್ಯ ಸೇವಿಸುವ ಸಾಧ್ಯತೆ ಇರುವುದರಿಂದ ಪರಿಸರ ವ್ಯವಸ್ಥೆಯ ಮೇಲೂ ದುಷ್ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರ ಸಂರಕ್ಷಣೆಯನ್ನು ಕಡೆಗಣಿಸಿದರೆ ಮುಳ್ಳಯ್ಯನಗಿರಿಸೀತಾಳಯ್ಯನಗಿರಿಯಂತಹ ಸೂಕ್ಷö್ಮ ಪರಿಸರ ಪ್ರದೇಶಗಳು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ಪ್ರವಾಸಿಗರ ತಪಾಸಣೆ ನಡೆಸುವುದು, ಕಸ ವಿಲೇವಾರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸುವುದು ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸುವ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ಗಿರಿ ಪ್ರದೇಶದ ನೈಸರ್ಗಿಕ ಸೌಂದರ್ಯ ಹಾಗೂ ಪಾವಿತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಶಾಶ್ವತ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಪರಿಸರಾಸಕ್ತ ವೀರೇಶ್ ಒತ್ತಾಯಿಸಿದ್ದಾರೆ.