ಶೃಂಗೇರಿಯ ಬೆಳಂದೂರು ಮಹಾಗಣಪತಿ ದೇವಸ್ಥಾನದ ಮರುಪ್ರತಿಷ್ಠೆ ಹಾಗೂ ಕುಂಭಾಭಿಷೇಕವನ್ನು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ನೆರವೇರಿಸಿದರು
ಶೃಂಗೇರಿ: ಆಧುನಿಕ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನ ಬೆಳೆದಿದೆ. ಎಷ್ಟೇ ಸೌಕರ್ಯ ನಮ್ಮ ಜತೆಗಿದ್ದರೂ ದುಃಖ ಎಂಬುದು ನಾಶವಾಗುವುದಿಲ್ಲ. ಸುಖಕ್ಕೆ ಪ್ರಮುಖ ಕಾರಣ ಧರ್ಮ. ದುಃಖಕ್ಕೆ ಪ್ರಮುಖ ಕಾರಣ ಅಧರ್ಮ. ಹಾಗಾಗಿ ನಾವು ಧಾರ್ಮಿಕ ಆಚರಣೆ ಹಾಗೂ ಭಗವಂತನ ಆರಾಧನೆ ಮಾಡಬೇಕು ಎಂದು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.
ಬೆಳಂದೂರು ಮಹಾಗಣಪತಿ ದೇವಸ್ಥಾನದ ಮರುಪ್ರತಿಷ್ಠೆ ಮತ್ತು ಕುಂಭಾಭಿಷೇಕ ನೆರವೇರಿಸಿ ಅನುಗ್ರಹ ಭಾಷಣ ಮಾಡಿದ ಅವರು, ಭಗವಂತನ ಸ್ವರೂಪಗಳು ಹಲವು ರೂಪಗಳಲ್ಲಿವೆ. ಆದರೆ ಪರಮಾತ್ಮ ಒಬ್ಬನೇ. ನಾವು ಯಾವ ರೂಪದಲ್ಲಿರುವ ಭಗವಂತನನ್ನು ಪೂಜಿಸಿದರೂ ಸಿಗುವ ಲ ಒಂದೇ ಆಗಿರುತ್ತದೆ. ಪ್ರಸ್ತುತ ಹಲವರು ಉದ್ಯೋಗ ಹಾಗೂ ಶಿಕ್ಷಣದ ಉದ್ದೇಶಕ್ಕಾಗಿ ದೊಡ್ಡ ನಗರಗಳಿಗೆ ತೆರಳುತ್ತಾರೆ. ಆದರೆ ಅವರು ತಮ್ಮ ಮೂಲಸ್ಥಾನ ಮರೆಯಬಾರದು. ಪ್ರತಿವರ್ಷ ಮೂಲಸ್ಥಾನದ ದೇವಾಲಯಗಳ ಧಾರ್ಮಿಕ ಆಚರಣೆಗಳಲ್ಲಿ ಶ್ರದ್ಧಾಭಕ್ತಿಯಿಂದ ಭಾಗವಹಿಸಿ ನಮ್ಮ ಪರಂಪರೆಯನ್ನು ಗೌರವಿಸಬೇಕು. ಪಾಲಕರು ತಮ್ಮ ಮಕ್ಕಳಿಗೆ ಆಧ್ಯಾತ್ಮಿಕ ಮೌಲ್ಯದ ಶ್ರೇಷ್ಠತೆ ಹೇಳಿಕೊಡಬೇಕು ಎಂದರು.
ಬಂಗಾರದ ಸರಪಳಿ ಅಥವಾ ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿದರೂ ಅದು ಬಂಧನವಾಗಿರುತ್ತದೆ. ಆಧುನಿಕ ಸೌಕರ್ಯ ಇದ್ದರೂ ದುಃಖ ಎಂಬುದು ಸದಾ ಇರುತ್ತದೆ. ಧರ್ಮ ಎಂಬುದು ಪರಿಕಲ್ಪನೆಯಲ್ಲ. ಅದು ನಮ್ಮ ಶ್ರೇಯಸ್ಸಿಗಾಗಿ ಇರುವ ಅಪರೂಪದ ಹಾದಿ ಎಂದು ತಿಳಿಸಿದರು.