ಪ್ರಮುಖ ಮುಖ್ಯಾಂಶಗಳು
ಬೀರೂರು: ಬೀರೂರು ಹೊರ ವಲಯದ ಕೈಗಾರಿಕಾ ಪ್ರದೇಶದ ಬಳಿ ಚಿರತೆ ಸಂಚರಿಸಿರುವುದು ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ.
ರಾಷ್ಟ್ರೀಯ ಹೆದ್ದಾರಿ 206ರ ಸಮೀಪದ ಕೈಗಾರಿಕಾ ಪ್ರದೇಶ ಅಮೃತ್ ಮಹಲ್ ಕಾವಲಿಗೆ ಹೊಂದಿಕೊಂಡಿದ್ದು, ಆಗಾಗ ಚಿರತೆಗಳು ಸಂಚರಿಸುತ್ತಿರುತ್ತವೆ. ಆಹಾರಕ್ಕಾಗಿ ಕುರಿ, ಕೋಳಿ, ನಾಯಿಗಳನ್ನು ಹೊತ್ತುಕೊಂಡು ಹೋಗುತ್ತಿರುತ್ತವೆ. ಕೈಗಾರಿಕಾ ಪ್ರದೇಶ ಬಳಿಯಲ್ಲಿರುವ ಪುಟ್ಟಣ್ಣ ಎಂಬುವವರು ಮನೆ ನಿರ್ಮಿಸಿಕೊಂಡು ಶುದ್ಧ ನೀರಿನ ಘಟಕ ಹಾಗೂ ಬ್ರಿಕ್ಸ್ ಕಾರ್ಖಾನೆ ನಡೆಸುತ್ತಿದ್ದಾರೆ. ಗುರುವಾರ ರಾತ್ರಿ ಚಿರತೆ ಮನೆ ಬಳಿಗೆ ಬಂದು ನಾಯಿಯನ್ನು ಬೇಟೆಯಾಡಲು ಹೊಂಚು ಹಾಕುತ್ತಿರುವ ದೃಶ್ಯವನ್ನು ಕಂಡು ಪುಟ್ಟಣ್ಣ ಕಂಗಾಲಾಗಿದ್ದಾರೆ. ಈ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿಯೂ ಸೆರೆಯಾಗಿದೆ.
ಬೀರೂರು ವಲಯ ಅರಣ್ಯ ಅಧಿಕಾರಿ ರಜಿನಿ ಮಾತನಾಡಿ, ಕೈಗಾರಿಕಾ ಪ್ರದೇಶ ಅಮೃತ್ ಮಹಲ್ ಕಾವಲಿಗೆ ಹೊಂದಿಕೊಂಡಂತಿರುವುದರಿಂದ ವನ್ಯಮೃಗಗಳು ಸಂಚರಿಸುತ್ತಿರುತ್ತವೆ. ದೋಗಿಹಳ್ಳಿ ಬಳಿ ಚಿರತೆ ಓಡಾಟದ ದೂರು ಬಂದಿದ್ದರಿಂದ ಅಲ್ಲಿ ಬೋನು ಇರಿಸಲಾಗಿತ್ತು. ಆದರೆ ಅಲ್ಲಿ ಚಿರತೆ ಸೆರೆ ಸಿಕ್ಕಿರಲಿಲ್ಲ. ಕೈಗಾರಿಕಾ ಪ್ರದೇಶದ ಸ್ಥಳ ಪರಿಶೀಲನೆ ನಡೆಸಿ ಬೋನು ಇರಿಸಲಾಗುತ್ತದೆ ಎಂದು ಹೇಳಿದ್ದಾರೆ.