ಕೊಪ್ಪ ತಾಲೂಕು ಆಡಳಿತದ ನೇತೃತ್ವದಲ್ಲಿ ನಮ್ಮ ಕೊಪ್ಪ ಸ್ವಚ್ಛ ಕೊಪ್ಪ ಅಭಿಯಾನದ ನಿಮಿತ್ತ ರಾಘವೇಂದ್ರ ನಗರದ ರಸ್ತೆ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. 
ಚಿಕ್ಕಮಗಳೂರು

ಸ್ವಚ್ಛ ಕೊಪ್ಪಕ್ಕೆ ಮುಂದಾದ ಆಡಳಿತ ವ್ಯವಸ್ಥೆ

ಕೊಪ್ಪ: ಇಲ್ಲಿನ ತಾಲೂಕು ಆಡಳಿತ ಪಟ್ಟಣವನ್ನು ಸ್ವಚ್ಛವಾಗಿಡಲು ಭಾನುವಾರ ಸಾರ್ವಜನಿಕರು, ವಿವಿಧ ಸಂಘಟನೆಯ ಜತೆಯಲ್ಲಿ ಪಟ್ಟಣ ಪಂಚಾಯಿತಿ ಮುಂದಾಳತ್ವದಲ್ಲಿ ನೇರವಾಗಿ ಫೀಲ್ಡಿಗೆ ಇಳಿದಿತ್ತು. ಪಟ್ಟಣದ ನಾಲ್ಕು ದಿಕ್ಕುಗಳ ರಸ್ತೆ ಬದಿಯಲ್ಲಿ ಎಸೆಯಲಾಗಿದ್ದ ಕಸವನ್ನು ಸಂಗ್ರಹಿಸಲಾಯಿತು.
ಪಟ್ಟಣಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಕಸವನ್ನು ಎಸೆದು ಅಲ್ಲಲ್ಲಿ ಕಸದ ಚೀಲ, ಸ್ಯಾನಿಟರಿ ಇನ್ನಿತರ ಕೊಳಚೆಗಳ ರಾಶಿ ಅಸಹ್ಯ ಹುಟ್ಟಿಸುವಂತಿತ್ತು. ಇದನ್ನು ಗಮನಿಸಿದ ತಹಸೀಲ್ದಾರ್ ಲಿಖಿತ ಮೋಹನ್ ಪಟ್ಟಣ ಪಂಚಾಯಿತಿ ಜತೆಗೂಡಿ ಸಾರ್ವಜನಿಕರ ಜತೆ ಸಮಾಲೋಚನೆ ನಡೆಸಿ ‘ನಮ್ಮ ಕೊಪ್ಪ ಸ್ವಚ್ಛ ಕೊಪ್ಪ’ ಅಭಿಯಾನವನ್ನು ಹುಟ್ಟುಹಾಕಿದ್ದಾರೆ.
ಈ ಅಭಿಯಾನದ ಭಾಗವಾಗಿ ಭಾನುವಾರ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೊಪ್ಪದ ದ್ಯಾವೇಗೌಡ ವೃತ್ತದಿಂದ ಬಾಲಗಡಿ ರಸ್ತೆ, ಮೇಲಿನ ಪೇಟೆ, ಕೆಳಗಿನ ಪೇಟೆ ಹಾಗೂ ಹಿರಿಕೆರೆಯಿಂದ ಸಿಗದಾಳು ಘಾಟಿಯವರೆಗೆ ರಸ್ತೆ ಇಕ್ಕೆಲಗಳಲ್ಲಿ ಬಿದ್ದಿದ್ದ ಕಸವನ್ನು ಸಂಗ್ರಹಿಸಿ ಸ್ವಚ್ಛಗೊಳಿಸಲಾಗಿದೆ.
ಈ ಹಿಂದೆ ವಿವಿಧ ಸಂಘಟನೆ, ರಾಜಕೀಯ ಪಕ್ಷಗಳು ಸ್ವಚ್ಛತಾ ಕಾರ್ಯ ನಡೆಸಿದ್ದವು. ನಂತರದಲ್ಲಿ ಮತ್ತೆ ಕಸ ಬೀಳುವ ಪ್ರಸಂಗ ಇಲ್ಲಿಯವರೆಗೂ ನಡೆಯುತ್ತ ಬಂದಿದೆ. ಈ ಸ್ವಚ್ಛತಾ ಅಭಿಯಾನಲ್ಲಿ ನೇರವಾಗಿ ತಾಲೂಕು ಆಡಳಿತ ಭಾಗಿಯಾಗಿರುವುದರಿಂದ ಎಷ್ಟು ದಿನ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಯಶ್ವಸಿಯಾಗುತ್ತದೆ ಹಾಗೂ ಕಸವನ್ನು ಎಸೆಯುವವರ ಸಂಖ್ಯೆ ಇಳಿಮುಖವಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.
ಭಾನುವಾರ ಹಮ್ಮಿಕೊಂಡಿದ್ದ ನಮ್ಮ ಕೊಪ್ಪ ಸ್ವಚ್ಛ ಕೊಪ್ಪ ಅಭಿಯಾನದಲ್ಲಿ ಕಂದಾಯ, ಆರೋಗ್ಯ, ಆರ್.ಡಿ.ಪಿ.ಆರ್, ಕೊಪ್ಪ ಗ್ರಾಮಾಂತರ ಗ್ರಾಪಂ, ಹರಂದೂರು ಹಾಗೂ ಬಿಂತ್ರವಳ್ಳಿ ಗ್ರಾಪಂ, ಪಟ್ಟಣ ಪಂಚಾಯಿತಿ, ಪೊಲೀಸ್ ಇಲಾಖೆ, ರೋಟರಿ, ಜೆಸಿಐ, ಸೈಕಲ್ ಗ್ರೂಪ್, ಲಗೋರಿ ಗ್ರೂಪ್, ಸರ್ಕಾರಿ ನೌಕರರ ಸಂಘಗಳು ಭಾಗವಹಿಸಿದ್ದವು. ತಾಪಂ ಇಒ ನವೀನ್ ಕುಮಾರ್, ಪಪಂ ಮುಖ್ಯಾಧಿಕಾರಿ ಕುರಿಯಾಕೋಸ್, ಆರೋಗ್ಯ ಇಲಾಖೆಯ ಸುಧಾಕರ್, ರೋಟರಿ ಕ್ಲಬ್‌ನ ಡಾ. ಉದಯ್‌ಕುಮಾರ್ ಇತರರಿದ್ದರು.