ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಬಿದ್ದಿದ್ದ ಕಸವನ್ನು ಶಾಸಕಿ ನಯನಾ ಮೋಟಮ್ಮ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ದಯಾವತಿ, ಮಂಜುನಾಥ್, ದಿಲೀಪ್‌ಕುಮಾರ್, ಸಿಂಚನಾ ಇತರರಿದ್ದರು. 
ಚಿಕ್ಕಮಗಳೂರು

ಪರಿಸರವನ್ನು ಸಂರಕ್ಷಿಸಿದರೆ ಭವಿಷ್ಯ ಉಜ್ವಲ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ಸಮಾಜ ಸಂಸ್ಕೃತಿಯನ್ನು ಕಳೆದುಕೊಳ್ಳಲಿದೆ
  • ಚಾರ್ಮಾಡಿ ಘಾಟ್
ಮೂಡಿಗೆರೆ: ಪ್ರಕೃತಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಪರಿಸರ ಉಳಿದರೆ ಮಾತ್ರ ಮುಂದಿನ ಪೀಳಿಗೆಯ ಭವಿಷ್ಯ ಸುರಕ್ಷಿತವಾಗಿ ನಿರ್ಮಿಸಲು ಸಾಧ್ಯ. ಪರಿಸರವನ್ನು ನಾಶಪಡಿಸಿದರೆ ಆರೋಗ್ಯ ಹದಗಡುವ ಜತೆಗೆ ಸಮಾಜ ಸಂಸ್ಕೃತಿಯನ್ನು ಕಳೆದುಕೊಳ್ಳಲಿದೆ ಎಂದು ಶಾಸಕಿ ನಯನಾ ಮೋಟಮ್ಮ ಅಭಿಪ್ರಾಯಪಟ್ಟರು.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಮಿತಿ ಹಾಗೂ ಯುವ ಕಾಂಗ್ರೆಸ್ ಮತ್ತು ವಿವಿಧ ಇಲಾಖೆಯಿಂದ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ರಸ್ತೆ ಬದಿ ತ್ಯಾಜ್ಯವನ್ನು ತೆರವುಗೊಳಿಸಿ ಮಾತನಾಡಿದರು. ಚಾರ್ಮಾಡಿ ಘಾಟ್ ಪಶ್ಚಿಮ ಘಟ್ಟದ ಪ್ರಮುಖ ಪರಿಸರ ಸೂಕ್ಷ್ಮ ಪ್ರದೇಶವಾಗಿದೆ. ಪ್ರವಾಸಿಗರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯದೆ ಸ್ವಚ್ಛತೆ ಕಾಪಾಡಬೇಕು. ಪರಿಸರ ಸಂರಕ್ಷಣೆಯ ಜವಾಬ್ದಾರಿ ಗ್ರಾಪಂ ಅಥವಾ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತಕ್ಕೆ ಮಾತ್ರವಲ್ಲದೆ ಸಾರ್ವಜನಿಕರ ಮೇಲೂ ಇದೆ ಎಂದು ತಿಳಿಸಿದರು.
ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಕಸ ಸಂಗ್ರಹ ವಾಹನಗಳಿವೆ. ಅವೆಲ್ಲವೂ ಮನೆಗಳು ಮತ್ತು ವ್ಯಾಪಾರ ಕೇಂದ್ರಗಳ ಮುಂದೆ ಬಂದು  ಕಸ ಸಂಗ್ರಹಣೆಯಲ್ಲಿ ತೊಡಗಿದ್ದರೂ, ವಿವಿಧ ರಸ್ತೆಗಳ ಬದಿಯಲ್ಲಿ ತ್ಯಾಜ್ಯದ ರಾಶಿ ಸಂಗ್ರಹವಾಗುತ್ತಿದೆ. ರಸ್ತೆ ಬದಿಯನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
 ಚಾರ್ಮಾಡಿ ಘಾಟ್ ಪ್ರದೇಶದ ಹೆದ್ದಾರಿ ಬದಿ ಬಿದ್ದಿದ್ದ ತ್ಯಾಜ್ಯ ಸಂಗ್ರಹಿಸಿ ವಾಹನದಲ್ಲಿ ಸಾಗಿಸಲಾಯಿತು. ತಾಪಂ ಇಒ ದಯಾವತಿ, ವಲಯ ಅರಣ್ಯಾಧಿಕಾರಿ ಮಂಜುನಾಥ್, ಬಣಕಲ್ ಪಿಎಸ್‌ಐ ದಿಲೀಪ್‌ಕುಮಾರ್, ತರುವೆ ಪಿಡಿಒ ಸಿಂಚನಾ, ತ್ರಿಪುರ ಪಿಡಿಒ ಎಚ್.ಎನ್.ಮಹೇಶ್, ಬಣಕಲ್ ಪಿಡಿಒ ದರ್ಶನ್, ಕಾಂಗ್ರೆಸ್ ಮುಖಂಡರಾದ ಶ್ರೇಣಿಖ್, ಸುಬ್ರಹ್ಮಣ್ಯ, ಸಿ.ಬಿ.ಶಂಕರ್, ಸುಬ್ರಾಯ ಗೌಡ, ಯಾಕೂಬ್ ಗೋಣಿಗದ್ದೆ, ವಿನಯ್, ದಿಲ್ದಾರ್ ಬೇಗಂ, ದೇವರಾಜ್ ಸಬ್ಲಿ, ಜಾನಕಿ, ದೀಕ್ಷಿತ್ ಕಣಚೂರು, ಆರ್ಯ ಪಟೇಲ್, ಆಶಿಕ್, ಶ್ರೀಜಿತ್, ವಿಶ್ವನಾಥ್ ಕಳಸ, ಜಗದೀಶ್, ಲವ ಇತರರಿದ್ದರು.