ಮೂಡಿಗೆರೆಯಲ್ಲಿ ವಿಮೆನ್ ಇಂಡಿಯಾ ಮೂಮೆಂಟ್ ನೂತನ ಜಿಲ್ಲಾ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮೂಡಿಗೆರೆ: ರಾಜಕೀಯದಲ್ಲಿ ಮಹಿಳೆಯರಿಗೆ ಅವಕಾಶಗಳು ಸಿಗುತ್ತಿಲ್ಲ. ಮಹಿಳೆಯರ ರಾಜಕೀಯ ಹಕ್ಕಿಗಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ವಿಮೆನ್ ಇಂಡಿಯಾ ಮೂಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಹೇಳಿದರು.
ಪಟ್ಟಣದಲ್ಲಿ ನಡೆದ ವಿಮೆನ್ ಇಂಡಿಯಾ ಮೂಮೆಂಟ್ ಜಿಲ್ಲಾ ಸಮಿತಿ ರಚನಾ ಸಭೆಯಲ್ಲಿ ಮಾತನಾಡಿ, ರಾಜಕೀಯ ಲೆಕ್ಕಾಚಾರದ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಬೇಕು. ಮಹಿಳಾ ಮತದಾರರು ಹೆಚ್ಚಾಗಿದ್ದು, ಮಹಿಳೆಯರಿಂದ ಮತ ಪಡೆದು ಅಧಿಕಾರ ನಡೆಸುತ್ತಿರುವ ರಾಜಕಾರಣಿಗಳು ಮಹಿಳೆಯರಿಗೆ ರಾಜಕೀಯವಾಗಿ ಸಿಗಬೇಕಾದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ರಾಜಕೀಯ ಹಕ್ಕುಗಳಿಸಿಕೊಳ್ಳಲು ಮಹಿಳೆಯರು ಸಂಘಟಿತರಾಗಿ ಆಂದೋಲನದಲ್ಲಿ ತೊಡಗಬೇಕು. ಮಹಿಳೆಯರಿಗೆ ಶೇ.50ರಷ್ಟು ರಷ್ಟು ಮೀಸಲಾತಿ ಘೋಷಣೆಯಾಗಿದ್ದರೂ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಇಂತಹ ವ್ಯವಸ್ಥೆ ಬದಲಾಗದಿದ್ದರೆ ಮಹಿಳೆಯರು ಮತ್ತು ಮಕ್ಕಳಿಗೆ ದೇಶದಲ್ಲಿ ಆರ್ಥಿಕ ಮತ್ತು ಸಾಮಾಜಿಕವಾದ ಶಕ್ತಿ ಇಲ್ಲದಂತಾಗುತ್ತದೆ ಎಂದು ತಿಳಿಸಿದರು.
ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸಾಚಾರಗಳು ಕೊನೆಗೊಳ್ಳಬೇಕಾದರೆ ಮಹಿಳೆಯರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವಂತಹ ನಾಯಕಿಯರು ಚುನಾವಣಾ ರಾಜಕೀಯದಲ್ಲಿ ಪಾಲ್ಗೊಂಡು ಚುನಾಯಿತರಾಗಿ ಅಧಿಕಾರ ಹಿಡಿದು ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕಿದೆ. ಮಹಿಳಾ ಕಾಯ್ದೆ, ಕಟ್ಟಲೆಗಳು ಎಷ್ಟೇ ದೊಡ್ಡ ಶಕ್ತಿಯನ್ನು ಹೊಂದಿದ್ದರೂ ದೌರ್ಜನ್ಯಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಲು ಮಹಿಳೆಯರು ಆಯಕಟ್ಟಿನ ಜಾಗದಲ್ಲಿ ಅಧಿಕಾರದಲ್ಲಿರಬೇಕು ಎಂದು ತಿಳಿಸಿದರು.
ಎಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮುಸ್ತಫಾ ಮಾತನಾಡಿ, ಮಹಿಳಾ ರಾಜಕೀಯಕ್ಕೆ ಹೆಚ್ಚಿನ ಮಹತ್ವವಿದೆ. ಭ್ರಷ್ಟಾಚಾರವನ್ನು ಬೇರುಸಮೇತ ಕಿತ್ತೊಗೆಯಲು ಮಹಿಳೆಯರು ಅಧಿಕಾರಕ್ಕೆ ಬರಬೇಕು. ರಾಜರ ಆಳ್ವಿಕೆ ಕಾಲದಲ್ಲಿ ಬಹುತೇಕ ಮಹಿಳೆಯರು ಅಧಿಕಾರ ಹಿಡಿದು ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷೆ ಆಯಿಷಾ, ಉಪಾಧ್ಯಕ್ಷೆ ಆಶಾ ಸಂತೋಷ್, ಪ್ರಧಾನ ಕಾರ್ಯದರ್ಶಿ ಮಾಹೀನ್, ಕಾರ್ಯದರ್ಶಿ ವೀಣಾ, ಕೋಶಾಧಿಕಾರಿ ನಝ್ರತ್, ಜಿಲ್ಲಾ ಸಮಿತಿ ಸದಸ್ಯರಾಗಿ ತಸ್ಲೀಮಾ, ತರನ್ನುಮ್ ಆಯ್ಕೆಯಾಗಿದ್ದಾರೆ. ರಾಜ್ಯ ಸಮಿತಿ ಸದಸ್ಯರಾದ ರಮ್ಲತ್, ರೂಬಿ ಇತರರಿದ್ದರು.