ಹೊಗರೇಹಳ್ಳಿಯಲ್ಲಿ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ಬ್ರಹ್ಮರಥೋತ್ಸವ ನಡೆಯಿತು.  
ಚಿಕ್ಕಮಗಳೂರು

ಸಂಭ್ರಮದ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ

ಬೀರೂರು: ಹೊಗರೇಹಳ್ಳಿ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.
 ಶುಕ್ರವಾರ ಧ್ವಜಾರೋಹಣ, ಜಾಂಡೆಗಣ ಏರಿಸುವುದು, ಸಂಜೆ ಸಣ್ಣ ಹಾಗೂ ದೊಡ್ಡ ಕಂಚಿನ ಗರುಡೋತ್ಸವ ನೆರವೇರಿದವು. ಶನಿವಾರ ಕುಂಭಾಭಿಷೇಕ ಮತ್ತು ಕಲ್ಯಾಣೋತ್ಸವ, ಸಂಜೆ ಕಲ್ಪವೃಕ್ಷ ವಾಹನೋತ್ಸವ ಮತ್ತು ಸಣ್ಣ ಕಂಚಿನ ಗರುಡೋತ್ಸವ, ರಾತ್ರಿ ಶ್ರೀ ರಂಗನಾಥಸ್ವಾಮಿ ಹಾಗೂ ಶ್ರೀ ಲಕ್ಷ್ಮೀ ಅಮ್ಮನವರ ದಿವ್ಯ ಕಲ್ಯಾಣೋತ್ಸವ, ಗಜಾರೋಹಣ ಉತ್ಸವ ನಡೆದವು. 
ಭಾನುವಾರ ಬೆಳಗ್ಗೆ ಶ್ರೀದೇವಿ-ಭೂದೇವಿ ಸಮೇತ ಶ್ರೀ ರಂಗನಾಥಸ್ವಾಮಿಗೆ ರತ್ನಾಭರಣ, ಗಂಧ ಪುಷ್ಪಗಳೊಂದಿಗೆ ಅಲಂಕೃತವಾಗಿ ವೇದಘೋಷ, ಮಂಗಳವಾದ್ಯಗಳೊಂದಿಗೆ ರಥಾರೋಹಣಕ್ಕಾಗಿ ಮಂಟಪಕ್ಕೆ ತರಲಾಯಿತು. ಸಂಪ್ರದಾಯವಾಗಿ ಬ್ರಹ್ಮ ರಥೋತ್ಸವದಲ್ಲಿ ಮೊದಲ ಮಂಗಳಾರತಿಯ ಪ್ರಧಾನ ಬಾವುಟ ಹರಾಜು ನಡೆಸಲಾಯಿತು. ಶಾಸಕ ಕೆ.ಎಸ್.ಆನಂದ್ ಈ ಬಾರಿ 5.05 ಲಕ್ಷ ರೂ. ಬಿಡ್ ಮಾಡಿ ತಮ್ಮದಾಗಿಸಿಕೊಂಡು ದೇವಾಲಯದ ಪ್ರಥಮ ಪೂಜೆಗೆ ಭಾಜನರಾದರು. ನಂತರ ಸುತ್ತಮುತ್ತಲಿನ ದೇವಾಲಯದವರ ಒಕ್ಕಲಿನ ಹೆಸರಿನಲ್ಲಿ ತೆಂಗಿನ ಕಾಯಿಯನ್ನು ಹಂಚಿಕೆ ಮಾಡಿ ರಥದ ಚಕ್ರಗಳಿಗೆ ಒಡೆದ ತಕ್ಷಣ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಗೋವಿಂದಾ ಗೋವಿಂದಾ... ಎಂಬ ಘೋಷಗಳನ್ನು ಕೂಗುತ್ತ ರಥ ಎಳೆದರು. ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತರು ಬಾಳೆಹಣ್ಣುಗಳನ್ನು ರಥದ ಕಳಸಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ಸ್ವಲ್ಪ ದೂರ ಚಲಿಸಿ ನಿಂತ ರಥಕ್ಕೆ ಭಕ್ತರು ಹಣ್ಣು ಕಾಯಿ ನೀಡಿ ಮಂಗಳಾರತಿ ಮಾಡಿಸಿದರು.
 ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ ಮಾತನಾಡಿ, ಶ್ರೀರಂಗ ಭಕ್ತರಿಗೆ ಒಳಿತು ಮಾಡಲಿ ಹಾಗೂ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯಲಿದ್ದು ಭಕ್ತರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಸಮೀಪದ ಆಸ್ಪತ್ರೆ ಆವರಣದಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು. ಶ್ರೀಕೃಷ್ಣ  ಗಂಧೋತ್ಸವ ಮತ್ತು ನಾಣ್ಯಗಳಿಂದ ರಜತಾಭಿಷೇಕ ನಡೆಸಲಾಗಿದ್ದ ನಾಣ್ಯಗಳನ್ನು ಶ್ರೀ ಸ್ವಾಮಿಯ ಹೆಸರಿನಲ್ಲಿ ನೆರೆದಿರುವ ಭಕ್ತಾದಿಗಳಿಗೆ ದಾಸೋಹದಲ್ಲಿ ನೀಡಲಾಯಿತು. ಈ ಬಾರಿ ಅಡುಗೆ ಅನಿಲದ ಸಮಸ್ಯೆ ಎದುರಾಗಿದ್ದರಿಂದ ಸೌದೆ ಒಲೆಯಲ್ಲಿ ಅಡುಗೆ ಸಿದ್ಧಪಡಿಸಲಾಗಿತ್ತು. ರಥೋತ್ಸವದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಭದ್ರಾವತಿ, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಮುಂತಾದ ಊರುಗಳಿಂದ ಭಕ್ತರು ಆಗಮಿಸಿದ್ದರು.