ಕಳಸದ ಕಲ್ಲಾಟಗುಡ್ಡದಲ್ಲಿ ನಿವೇಶನ ರಹಿತರಿಗೆ ಹಂಚಿಕೆ ಮಾಡಿರುವ ನಿವೇಶನ. 
ಚಿಕ್ಕಮಗಳೂರು

ನಿವೇಶನ ಸಿಕ್ಕ ಸಂಭ್ರಮ ಮನೆ ನಿರ್ಮಾಣಕ್ಕಿಲ್ಲ

ಕಳಸ: ಸರ್ಕಾರ ನಿವೇಶನ ನೀಡಿದೆ, ಆದರೆ ಮನೆ ನಿರ್ಮಾಣಕ್ಕೆ ಹಣ ಎಲ್ಲಿಂದ ತರಬೇಕು?. ಕೂಲಿ ಮಾಡಿ ದಿನದೂಡುವುದೇ ಕಷ್ಟವಾಗಿರುವಾಗ, ಸರ್ಕಾರ ನೀಡುವ ವಸತಿ ಯೋಜನೆ ಸಹಾಯಧನಕ್ಕಾಗಿ ಕಾದು ಕಾದು ನಮ್ಮ ಕಣ್ಣುಗಳು ಧಣಿದು ಹೋಗಿವೆ. ಇದು ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾಟಗುಡ್ಡದಲ್ಲಿ ನಿವೇಶನ ಪಡೆದ ಬಡಕುಟುಂಬಗಳ ಆಳಲು.
ಅಂದು ಕೊಂಡತೆ ನಡೆದಿದ್ದರೆ ಕಳೆದ ಎರಡು ವಷರ್ಗಳ ಹಿಂದೆ ಐದು ಎಕರೆ ಭೂಮಿಯಲ್ಲಿ ವಿತರಿಸಿದ ನಿವೇಶನಗಳಲ್ಲಿ 75 ಕುಟುಂಬಗಳು ಮನೆ ಕಟ್ಟಿಕೊಂಡು ಸುಂದರ ಜೀವನ ಸಾಗಿಸುತ್ತಿದ್ದರು. ಆದರೆ ಇಂದು ಆ ಭೂಮಿಯಲ್ಲಿ ಕೇವಲ ಒಣಹುಲ್ಲು ಬೆಳೆದು ನಿಂತಿದೆಯೇ ಹೊರತು, ಒಂದೇ ಒಂದು ಬಡವನ ಸೂರು ತಲೆಯೆತ್ತಿಲ್ಲ. ನಿವೇಶನ ಸಿಕ್ಕ ಸಂಭ್ರಮದಲ್ಲಿದ್ದ ಬಡವರಿಗೆ ಈಗ ಸರ್ಕಾರಿ ವಸತಿ ಯೋಜನೆಗಳ ಅಸಹಕಾರವೇ ಶಾಪವಾಗಿ ಪರಿಣಮಿಸಿದೆ.
ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಿಂದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಿರಲಿಲ್ಲ. ಸುದೀರ್ಘ ಹೋರಾಟ ಮತ್ತು ಕಾಯುವಿಕೆ ನಂತರ ಎರಡು ವರ್ಷಗಳ ಹಿಂದೆ 75 ನಿವೇಶನ ರಹಿತ ಕುಟುಂಬಗಳಿಗೆ ಕಲ್ಲಾಟಗುಡ್ಡದಲ್ಲಿ 5 ಎಕರೆ ಭೂಮಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. 20ವರ್ಷಗಳ ಕನಸು ನನಸಾಯಿತು ಎಂದು ಸಂಭ್ರಮಿಸಿದ ಬಡ ಕೂಲಿ ಕಾರ್ಮಿಕರಿಗೆ ಈಗ ಆ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಶಕ್ತಿ ಇಲ್ಲದಂತಾಗಿದೆ. ನಿವೇಶನದ ಹಕ್ಕುಪತ್ರ ಕೈಯಲ್ಲಿದ್ದರೂ,ತಲೆಮೇಲೊಂದು ಸೂರಿಲ್ಲದೆ ಇಂದಿಗೂ ಬಾಡಿಗೆ ಮನೆಗಳಲ್ಲಿ,ಇಕ್ಕಟ್ಟಿನ ಕೊಠಡಿಗಳಲ್ಲಿ ದಿನದೂಡುತ್ತಿದ್ದಾರೆ.
ದಿನಪೂರ್ತಿ ಕಷ್ಟಪಟ್ಟು ಕೂಲಿ ಮಾಡಿದರೆ ಮಾತ್ರ ಹೊಟ್ಟೆ ತುಂಬಿಸಿಕೊಳ್ಳುವ ಈ ಕುಟುಂಬಗಳು ಸರ್ಕಾರ ನೀಡುವ ಮನೆಗಳಿಗಾಗಿ ಕಾದುಕುಳಿತಿವೆ. ಆದರೆ, ಬಡವರ ಪರ ಎಂದು ಹರಿನಾಮ ಜಪಿಸುವ ಸರ್ಕಾರ ಮಾತ್ರ ಕಳೆದ ಐದು ವಷರ್ಗಳಿಂದ ಒಂದೇ ಒಂದು ಮನೆ ಮಂಜೂರು ಮಾಡದೆ ನಿರ್ಲಕ್ಷ್ಯವಹಿಸಿದೆ. ಐದು ವರ್ಷಗಳ ಹಿಂದೆ ಅಂಬೇಡ್ಕರ್ ನಿವಾಸ್ ಯೋಜನೆಯಡಿ ಕಳಸ ಗ್ರಾಮ ಪಂಚಾಯಿತಿಗೆ 15 ಹಾಗೂ ಬಸವ ವಸತಿ ಯೋಜನೆಯಡಿ 50 ಮನೆಗಳನ್ನು ನೀಡಿದ್ದು ಬಿಟ್ಟರೆ, ಆ ಬಳಿಕ ಸರ್ಕಾರ ಕಳಸದ ಬಡವರತ್ತ ತಿರುಗಿ ನೋಡಿಲ್ಲ. ಬಡವರ ಸ್ವಂತ ಮನೆ ಕನಸು ಕೇವಲ ಕನಸಾಗಿ ಉಳಿದಿದೆ.