ಮೂಡಿಗೆರೆ ಪಟ್ಟಣದ ಲಯನ್ಸ್ ವೃತ್ತದಲ್ಲಿ ಬಿಜೆಪಿಯಿಂದ ಸಂಭ್ರಮಾಚರಣೆ ನಡೆಯಿತು. ಟಿ.ಎಂ.ಗಜೇಂದ್ರ, ದೀಪಕ್ ದೊಡ್ಡಯ್ಯ, ಪ್ರಶಾಂತ್, ಲೋಕೇಶ್ ಮರ್ಕಲ್, ನಯನ ತಳವಾರ ಇತರರಿದ್ದರು. 
ಚಿಕ್ಕಮಗಳೂರು

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿ ಮುಕ್ತಾಯಗೊಳ್ಳುವ ಕಾಲ ಸನ್ನಿಹಿತ

ಮೂಡಿಗೆರೆ: ಕಾಂಗ್ರೆಸ್ ಸರ್ಕಾರದ ಅಧಿಕಾರ ಕೊನೆಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ವಿಧಾನ ಪರಿಷತ್ ಚುನಾವಣೆ ರಾಜ್ಯ ಸರ್ಕಾರದ ಅಸ್ತಿತ್ವವನ್ನು ಬುಡಮೇಲು ಮಾಡಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಟಿ.ಎಂ.ಗಜೇಂದ್ರ ತಿಳಿಸಿದರು.

ಪಟ್ಟಣದ ಲಯನ್ ವೃತ್ತದಲ್ಲಿ ಬಿಜೆಪಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಸರ್ಕಾರದ ಖಜಾನೆ ಮಾಡಿದ್ದು, ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ. ಸರ್ಕಾರದಿಂದ ರಾಜ್ಯದ ಜನ ನೆಮ್ಮದಿ ಕಳೆದುಕೊಂಡಿದ್ದಾರೆ ಎಂದರು.

ವಿಧಾನ ಪರಿಷತ್‌ನ 4 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಪಡೆದಿರುವುದು ರಾಜ್ಯ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿದೆ. ಕಾಂಗ್ರೆಸ್ ಸರ್ಕಾರದ ಅವಧಿ ಕೊನೆಗೊಳ್ಳುವ ಕಾಲ ಸನ್ನಿತವಾಗಿದೆ. ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾಗುವ ಮುನ್ಸೂಚನೆ ದೊರೆತಿದೆ. ಅದಕ್ಕೆ ಬಿಜೆಪಿ ಕಾರ್ಯಕರ್ತರು ಸಿದ್ದರಾಗಿರಬೇಕು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ, ಕೇಂದ್ರ ಸರ್ಕಾರ ಅನೇಕ ಯೋಜಗಳನ್ನು ರಾಜ್ಯಕ್ಕೆ ನೀಡಿದರೂ ರಾಜ್ಯಸರ್ಕಾರ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಮಾಡಿಕೊಂಡು ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿವೆ. ಅದಕ್ಕೆ ಶಿಕ್ಷಕರು ಮತ್ತು ಪದವೀಧರರು ತಕ್ಕ ಉತ್ತರ ನೀಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ಪ್ರಶಾಂತ್, ಲೋಕೇಶ್ ಮರ್ಕಲ್, ನಯನ ತಳವಾರ, ಸಿದ್ದೇಶ್, ಸಂದೀಪ್, ಪ್ರಸನ್ನ, ಬಸವರಾಜ್, ರಂಗಣ್ಣ, ಚಂದ್ರಣ್ಣ, ಪ್ರವೀಣ, ವಿನ್ಸಿ, ರತನ್ ಊರುಬಗೆ ಇತರರಿದ್ದರು.

ಮುಂದಿನ ಚುನಾವಣೆಗೆ ದಿಕ್ಸೂಚಿ

ವಿಧಾನ ಪರಿಷತ್‌ನ ಶಿಕ್ಷಕರು ಹಾಗೂ ಪದವಿಧರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳಿಗೆ ಗೆಲುವು ಸಿಕ್ಕಿರುವುದು ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್.ಲಕ್ಷ್ಮಣಗೌಡ ಹೇಳಿದರು.

ಲಯನ್ಸ್ ವೃತ್ತದಲ್ಲಿ ನಡೆದ ವಿಜಯೋತ್ಸವದಲ್ಲಿ ಮಾತನಾಡಿ, ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಇವಿಎಂ ಬಗ್ಗೆ ಆರೋಪ ಮಾಡುತ್ತಿತ್ತು. ಈ ಬಾರಿ ನಡೆದ ಬ್ಯಾಲೆಟ್ ಪೇಪರ್ ಮತದಾನದಲ್ಲೂ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದರಿಂದ ಕಾಂಗ್ರೆಸ್ ನಡೆಸುತ್ತಿದ್ದ ಆರೋಪ ಸುಳ್ಳು ಎಂಬುದು ಸಾಬೀತಾಗಿದೆ ಎಂದು ತಿಳಿಸಿದರು. ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್ ಮಾತನಾಡಿ, ಇವಿಎಂ ಯಂತ್ರಗಳ ಮೂಲಕ ಬಿಜೆಪಿ ಗೆಲುವು ಸಾಧಿಸುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಈ ಚುನಾವಣೆ ಉತ್ತರ ನೀಡಿದೆ. ಮುಂದೆ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶಕ್ತಿಮೀರಿ ಶ್ರಮಿಸಬೇಕಿದೆ ಎಂದು ತಿಳಿಸಿದರು. ಲಯನ್ಸ್ ವೃತ್ತದಲ್ಲಿ ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಲಾಯಿತು. ರಾಜೇಂದ್ರ, ಲೋಹಿತ್, ವಿಜಯಕುಮಾರ್, ರವಿ, ಎಂ.ಸಿ.ಹೂವಪ್ಪ, ಮಹಮ್ಮದ್ ನೂರುಲ್ಲಾ, ಧರ್ಮೇಶ್, ಶಂಕರ್ ಜಕ್ಲಿ, ರಿಜ್ವಾನ್, ಚಂದ್ರು ನಿಡುವಾಳೆ, ಜಗನ್ನಾಥ್, ಅನಿಲ, ನಿಖಿಲ್, ಮರಿಗೌಡ, ಮಹೇಶ್, ಎಂ.ಡಿ.ಮಂಜುನಾಥ್ ಇತರರಿದ್ದರು.