ಮೂಡಿಗೆರೆಯ ಛತ್ರಮೈದಾನ ಬಡಾವಣೆ ರಸ್ತೆ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಛತ್ರಮೈದಾನ ಬಡಾವಣೆ ನಿವಾಸಿಗಳು ತಹಸಿಲ್ದಾರ್‌ಎಸ್.ಅಶ್ವಿನಿಗೆ ಮನವಿ ಸಲ್ಲಿಸಿದರು. 
ಚಿಕ್ಕಮಗಳೂರು

ಈ ರಸ್ತೆ ನಿರ್ಮಾಣದ ಹೊಣೆ ಹೊತ್ತ ಇಲಾಖೆ, ಗುತ್ತಿಗೆದಾರ ನಾಪತ್ತೆ

ಮೂಡಿಗೆರೆ: ಹೊಸದಾಗಿ ಕಾಂಕ್ರೀಟ್ ರಸ್ತೆ Concrete road ನಿರ್ಮಿಸಲು ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಯನ್ನು ತೆರವುಗೊಳಿಸಿ ಒಂದು ತಿಂಗಳು ಕಳೆದರೂ ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭಿಸದಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಆರೋಪಿಸಿ ಛತ್ರಮೈದಾನ ಬಡಾವಣೆ ನಿವಾಸಿಗಳು, ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಸ್.ಅಶ್ವಿನಿಗೆ ಮನವಿ ಸಲ್ಲಿಸಿದರು.
ಛತ್ರಮೈದಾನ ನಿವಾಸಿ ಕೆ.ಪಿ.ಖಾಲಿದ್ ಮಾತನಾಡಿ, ಉತ್ತಮ ಸ್ಥಿತಿಯಲ್ಲಿದ್ದ ರಸ್ತೆ ಅಗೆದು 1ತಿಂಗಳು ಕಳೆದರೂ ಕಾಂಕ್ರೆಟ್ ರಸ್ತೆ ಕಾಮಗಾರಿ ಆರಂಭಿಸಿಲ್ಲ. ರಸ್ತೆ ಅಗೆದು ಬಿಟ್ಟಿರುವುದರಿಂದ ಈಗ ಬಡಾವಣೆಯಲ್ಲಿ ಯಾವ ವಾಹನವೂ ಸಂಚರಿಸುವಂತಿಲ್ಲ. ಬೈಕ್‌ನಲ್ಲಿ ಸಂಚರಿಸಿ ಹಲವರು ಬಿದ್ದು ಗಾಯಗೊಂಡಿದ್ದಾರೆ. ಅನಾರೋಗ್ಯಪೀಡಿತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ತಿರುಗಾಡಲು ಹರಸಾಹಸ ಪಡಬೇಕಾಗಿದೆ. ರಸ್ತೆ ತೆರವುಗೊಳಿಸುವಾಗ ಬದಿಯಲ್ಲಿದ್ದ ನೀರಿನ ಪೈಪ್‌ಗಳನ್ನು ಒಡೆದು ಹಾಕಿದ್ದರಿಂದ ನೀರು ಸೋರಿಕೆಯಾಗುತ್ತಿದೆ. ಬಡಾವಣೆ ನಿವಾಸಿಗಳಿಗೆ ಕಳೆದ 1ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ ಎಂದು ದೂರಿದರು.
ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಯನ್ನು ತೆರೆವುಗೊಳಿಸಿ ಹೊಸದಾಗಿ ಕಾಂಕ್ರೀಟ್ ರಸ್ತೆ ಯಾವ ಇಲಾಖೆ ಅಡಿ ನಿರ್ಮಾಣವಾಗುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ಪಪಂ, ಲೋಕೋಪಯೋಗಿ ಇಲಾಖೆ, ನಿರ್ಮಿತಿ ಕೇಂದ್ರದ ಅಧಿಕಾರಿಗಳನ್ನು ವಿಚಾರಿಸಿದಾಗ ಈ ಕಾಮಗಾರಿ ನಮಗೆ ಸೇರಿಲ್ಲ ಎನ್ನುತ್ತಾರೆ. ಕಾಮಗಾರಿ ಗುತ್ತಿಗೆದಾರರು ಯಾರು, ನಿರ್ವಹಣೆ ಹೊಣೆ ಹೊತ್ತಿರುವ ಇಲಾಖೆ ಯಾವುದು ಎಂಬ ಮಾಹಿತಿ ಸಿಗುತ್ತಿಲ್ಲ. ಹಳೆ ರಸ್ತೆ ತೆರೆವುಗೊಳಿಸಿದ ಬಳಿಕ 6 ಇಂಚು ವೆಟಮಿಕ್ಸ್ ಹಾಕಿ ಸಮತಟ್ಟು ಮಾಡಬೇಕು. ಆದರೆ ಗುತ್ತಿಗೆದಾರ 2 ಇಂಚು ಮಾತ್ರ ವೆಟಮಿಕ್ಸ್ ಹಾಕಿ ಸಮತಟ್ಟು ಮಾಡದೆ ಪಲಾಯನ ಮಾಡಿದ್ದಾರೆ. ಕೂಡಲೇ ಕಾಮಗಾರಿ ಆರಂಭಿಸದಿದ್ದರೆ ಪಪಂ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.