ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ನಶಮುಕ್ತ ಯುವ ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು. ಪುಷ್ಪಾ, ಟಿ.ಕಳಸಪ್ಪ, ತ್ಯಾಗರಾಜ್ ಇತರರಿದ್ದರು. 
ಚಿಕ್ಕಮಗಳೂರು

ಯುವಜನರಿಂದ ದೇಶ ಬಲಾಢ್ಯ

ಪ್ರಮುಖ ಮುಖ್ಯಾಂಶಗಳು

  • ನಶಮುಕ್ತ ಯುವ ವಿಕಸಿತ ಭಾರತ
  • ಮೂವತ್ತೆಂಟು ಕೋಟಿ ಯುವಜನರು
ಶೃಂಗೇರಿ: ಶಕ್ತಿಶಾಲಿ, ಸ್ವಾಭಿಮಾನಿ ಭಾರತ ನಿರ್ಮಾಣ ಆಗಬೇಕಾದರೆ ಯುವಜನಾಂಗ ಶಕ್ತಿಶಾಲಿಯಾಗಬೇಕು. ಜಾತಿ, ಧರ್ಮಕ್ಕೂ ಮೊದಲು ದೇಶ ಮುಖ್ಯ ಎಂಬ ಅರಿವು ಸರ್ವರಲ್ಲೂ ಇರಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಜೆಸಿಬಿಎಂ ಕಾಲೇಜಿನಲ್ಲಿ ನಶಮುಕ್ತ ಯುವ ವಿಕಸಿತ ಭಾರತ ಸಂಕಲ್ಪ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯುವಶಕ್ತಿ ನಮ್ಮ ದೇಶದ ಅಪೂರ್ವ ಸಂಪತ್ತು. 17ರಿಂದ 35 ವರ್ಷದ ಮೂವತ್ತೆಂಟು ಕೋಟಿ ಯುವಜನರು ದೇಶದಲ್ಲಿದ್ದಾರೆ. ಇದರಲ್ಲಿ ಸುಮಾರು ಏಳುಕೋಟಿ ಜನರು ನಶೆಗೆ ದಾಸರಾಗಿರುವ ಮಾಹಿತಿ ಇದೆ. ದೇಶದ ಉನ್ನತೀಕರಣಕ್ಕೆ ಯುವಜನರು ನೀಡಬೇಕಾಗಿರುವ ಕೊಡುಗೆ ಅನುಪಮ ಎಂದರು. 
ದೇಶದ ಆರ್ಥಿಕ ಸ್ಥಿತಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದ್ದು, 2042ಕ್ಕೆ ದೇಶವು ಮೊದಲ ಸ್ಥಾನಕ್ಕೆ ಬರಬೇಕು. ನಶಮುಕ್ತ ಜನಜಾಗೃತಿಯನ್ನು ಕೇಂದ್ರಸರ್ಕಾರ ಹಮ್ಮಿಕೊಂಡಿದ್ದು, ಮಾದಕ ವಸ್ತುಗಳ ವ್ಯಸನ ವಿರುದ್ಧ ಸರ್ವರೂ ಹೋರಾಡಬೇಕಿದೆ. ದೇಶವನ್ನು ವ್ಯಸನಮುಕ್ತವಾಗಿಸಿ ಯುವಜನತೆಯಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ಕೆ ಸರ್ವರೂ ಕೈಜೋಡಿಸಬೇಕಿದೆ. ದೇಶವ್ಯಾಪ್ತಿ ಹತ್ತು ಸಾವಿರ ಜನರು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ ಎಂದರು.
400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಚಾರ್ಯ ಡಾ. ಎಂ.ಸ್ವಾಮಿ, ಉಪಪ್ರಾಚಾರ್ಯ ಎ.ಜಿ.ಪ್ರಶಾಂತ್, ಶೃಂಗೇರಿ ಶಾರಾದಾಪೀಠದ ಲೆಕ್ಕಪರಿಶೋಧಕ ಅಧಿಕಾರಿ ಸತೀಶ್, ಕಾಲೇಜು ಟ್ರಸ್ಟ್ ಸಮಿತಿ ಸದಸ್ಯ ಟಿ.ಕಳಸಪ್ಪ, ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯ ತ್ಯಾಗರಾಜ್ ಇತರರಿದ್ದರು.