ಕಾವಡಿ ಪಿಎಸಿಎಸ್ ಆವರಣದಲ್ಲಿ ಪ್ರಸನ್ನ ಬೇಗಾನೆ ಗಿಡ ನೆಟ್ಟರು. ರೋಹಿಣಿ, ಸುದರ್ಶನ್, ಶ್ರೀಧರ್ ಅಣ್ಣುಕೂಡಿಗೆ ಇದ್ದರು.
ಶೃಂಗೇರಿ: ಸಹಕಾರ ಸಂಘಗಳು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಪರಸ್ಪರ ಸಹಾಯದ ಆಧಾರದ ಮೇಲೆ ರಚನೆಯಾದ ಸಂಘಟಿತ ಸಂಸ್ಥೆಯಾಗಿವೆ. ಈ ನಿಟ್ಟಿನಲ್ಲಿ ಕಾವಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಮಾನತೆ ಹಾಗೂ ಸೇವಾಮನೋಭಾವದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಪ್ರಸನ್ನ ಬೇಗಾನೆ ತಿಳಿಸಿದರು.
ಶನಿವಾರ ಕೃಷಿ ಪತ್ತಿನ ಆವರಣದಲ್ಲಿ ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯಕ್ಕೆ ಐದು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಕಾವಡಿ ಪಿಎಸಿಎಸ್ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಕಾರ ಕ್ಷೇತ್ರ ವಿಶಾಲವಾಗಿದೆ. ಅದರ ಬಲವರ್ಧನೆಗಾಗಿ ಕೇಂದ್ರ ಸರ್ಕಾರ ಸರ್ವ ರೀತಿಯ ಸಹಕಾರ ನೀಡುತ್ತಿದೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ಕ್ಷೇತ್ರದ ಪಾತ್ರ ಹಿರಿದು. ಗ್ರಾಮೀಣ ಜನತೆಯ ಆರ್ಥಿಕ ಸಬಲತೆಗೆ ಹಾಗೂ ರೈತರಿಗೆ ಸರ್ವ ರೀತಿಯ ಸಹಕಾರವನ್ನು ಸಂಘ ನೀಡಬೇಕು. ಸಂಘದ ಎಲ್ಲ ನಿರ್ದೇಶಕರೂ ವಿಶ್ವಾಸ, ಸಹಕಾರದಿಂದ ಕಾರ್ಯನಿರ್ವಹಿಸಿದಾಗ ಸಂಘದ ಅಭಿವೃದ್ಧಿ ಸಾಧ್ಯ. ಸಂಘದ ಆಡಳಿತವು ಪ್ರಜಾಸತ್ತಾತ್ಮ ತತ್ವಗಳ ಮೇಲೆ ನಂಬಿಕೆ ಇರಿಸಿ ಕೆಲಸ ಮಾಡಬೇಕು. ಸಂಘದ ಸದಸ್ಯತ್ವವು ಸರ್ವರಿಗೂ ಮುಕ್ತವಾಗಿದ್ದು ಪಿಎಸಿಎಸ್ ಸಂಘದ ಸದಸ್ಯರು ಹಾಗೂ ರೈತರ ಶ್ರೇಯೋಭಿವೃದ್ಧಿಗಾಗಿ ನಿರಂತರ ದುಡಿಯುತ್ತಿದೆ ಎಂದರು. ನಿರ್ದೇಶಕ ಶ್ರೀಧರ್ ಅಣ್ಣುಕೂಡಿಗೆ, ಸಿಇಒ ರೋಹಿಣಿ, ಸಿಬ್ಬಂದಿ ಭರತ್, ಸುದರ್ಶನ್ ಇತರರಿದ್ದರು.