ಕಡೂರು: ಸಹಕಾರ ಕ್ಷೇತ್ರ ಯಾವುದೇ ಜಾತಿ, ಧರ್ಮ, ರಾಜಕೀಯಕ್ಕೆ ಸೀಮಿತವಾಗಿಲ್ಲ. ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ ಶಕ್ತಿ ತುಂಬಿ, ರೈತರು ಹಾಗೂ ಗ್ರಾಮೀಣ ಜನರ ಅಭಿವೃದ್ಧಿಗೆ ನೆರವಾಗುವ ಜನಪರ ಕ್ಷೇತ್ರವಾಗಿದೆ ಎಂದು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬೆಳ್ಳಿಪ್ರಕಾಶ್ ಅಭಿಪ್ರಾಯಿಸಿದರು.
ಗೆದ್ಲೇಹಳ್ಳಿಯ ಬಯಲು ಬಸವೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿನ್, ಡಿಸಿಸಿ ಬ್ಯಾಂಕ್, ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಸಹಕಾರ ಇಲಾಖೆ ಹಾಗೂ ಸಂಘಗಳ ಸಹಯೋಗದಲ್ಲಿ ನಡೆದ 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಹಕಾರ ಸಂಸ್ಥೆಗಳ ಮುಖಾಂತರ ಮೌಲ್ಯವರ್ಧನೆ-ಬ್ರ್ಯಾಂಡ್ ನಿರ್ಮಾಣ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಚಳವಳಿ ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಬಲವರ್ಧನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕೃಷಿ ಮತ್ತು ಹೈನುಗಾರಿಕೆಗೆ ಉತ್ತೇಜನ ನೀಡುವ ಮೂಲಕ ಸಾವಿರಾರು ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುತ್ತಿದೆ. ಕಡೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 14,250 ಕುಟುಂಬಗಳಿಗೆ ಇದುವರೆಗೆ ಸುಮಾರು 245 ಕೋಟಿ ರೂ.ಗೂ ಅಧಿಕ ಕೆಸಿಸಿ ಸಾಲ ಹಾಗೂ 160 ಕೋಟಿ ರೂ.ಗೂ ಹೆಚ್ಚು ಮಧ್ಯಮಾವಧಿ ಸಾಲ ಒದಗಿಸಲಾಗಿದೆ. ಅಪೆಕ್ಸ್ ಬ್ಯಾಂಕ್ನಿಂದ ಜಿಲ್ಲೆಗೆ ಒಟ್ಟು 9 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದರು.
ಹಾಸನ ಹಾಲು ಒಕ್ಕೂಟದ ನಿರ್ದೇಶಕ ಬಿದರೆ ಜಗದೀಶ್ ಮಾತನಾಡಿ, ಕಡೂರು ತಾಲೂಕಿನಲ್ಲಿ 300ಕ್ಕೂ ಅಧಿಕ ಹಾಲು ಉತ್ಪಾದಕರ ಸಹಕಾರ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹೈನುಗಾರರು ಹಾಗೂ ರೈತರಿಗೆ ನಿರಂತರ ಪ್ರೋತ್ಸಾಹ ನೀಡುತ್ತಿವೆ. ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ಯೋಜನೆ ಹಾಗೂ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾಗಿದೆ. ಇದರ ಜತೆಗೆ ಬೆಳ್ಳಿಪ್ರಕಾಶ್ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತಾಲೂಕಿನ ಸಾಕಷ್ಟು ಸಹಕಾರಿ ಕ್ಷೇತ್ರಗಳ ಬಲವರ್ಧನೆಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಒದಗಿಸಿರುವುದು ಸಂಘಗಳ ಅಭಿವೃದ್ಧಿಗೆ ವರದಾನವಾಗಿವೆ ಎಂದರು.
ರೈತರು ರಾಷ್ಟ್ರೀಕೃತ ಬ್ಯಾಂಕ್ಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಸ್ಥಳೀಯ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್ಗಳ ಮೂಲಕ ವ್ಯವಹಾರ ನಡೆಸುವುದರಿಂದ ಹಲವು ಅನುಕೂಲ ಪಡೆಯಬಹುದು. ಸರ್ಕಾರದ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ಸೇರಿದಂತೆ ವಿವಿಧ ಆರ್ಥಿಕ ನೆರವುಗಳು ಸಹಕಾರಿ ವ್ಯವಸ್ಥೆ ಮೂಲಕ ರೈತರಿಗೆ ತಲುಪುತ್ತಿವೆ. ಹೀಗಾಗಿ ಪ್ರತಿಯೊಬ್ಬ ರೈತರೂ ಸಹಕಾರ ಚಳವಳಿಯ ಭಾಗವಾಗಿ ಸಂಘಟಿತರಾಗಿ ಆರ್ಥಿಕ ಪ್ರಗತಿಯತ್ತ ಸಾಗಬೇಕು ಎಂದು ಕರೆ ನೀಡಿದರು.
ಕಡೂರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ಬರದಿಂದ ತತ್ತರಿಸುತ್ತಿದೆ. ತಾಲೂಕಿನಲ್ಲಿರುವ ಪ್ಯಾಕ್ಸ್ ಸಂಘಗಳಿಗೆ ಕಳೆದ 4 ವರ್ಷಗಳಿಂದ ಡಿಸಿಸಿ ಬ್ಯಾಂಕ್ನಿಂದ ಸಾಲ ನೀಡಿರುವುದಿಲ್ಲ. ಈ ನಿಟ್ಟಿನಲ್ಲಿ ಸಂಘಗಳ ಸದಸ್ಯರಿಗೆ ಹಿತಕಾಪಾಡಲು ಡಿಸಿಸಿ ಬ್ಯಾಂಕ್ ನಿರ್ದೇಶಕರು ತಾಲೂಕಿನ ಸಂಘಗಳಿಗೆ ಸಾಲ ಒದಗಿಸಿಕೊಡುವಂತೆ ಮನವಿ ಮಾಡಿದರು.
ಮತಿಘಟ್ಟ, ಹಿರೇನಲ್ಲೂರು ಪ್ಯಾಕ್ಸ್ ಸಂಘಗಳು ಮತ್ತು ನಾಗರಾಳು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಗೌರವಿಸಲಾಯಿತು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಕೆ.ದಿವಾಕರ, ಉಪಾಧ್ಯಕ್ಷ ಸೀಗೇಹಡ್ಲು ಹರೀಶ್, ನಿರ್ದೇಶಕ ಸಿ.ಎಚ್.ಕುಶಕುಮಾರ್, ವಿವಿಧ ಸಂಘಗಳ ಅಧ್ಯಕ್ಷ ಕೆ.ಎನ್.ಬೊಮ್ಮಣ್ಣ, ಕೆ.ಬಿ.ಬಸವರಾಜಪ್ಪ, ಡಿಸಿಸಿ ಬ್ಯಾಂಕ್ ಸಿಇಒ ಪ್ರವೀಣ್ ಬಿ.ನಾಯ್ಕ, ಸಹಕಾರ ಅಭಿವೃದ್ಧಿ ಅಧಿಕಾರಿ ಅನುಪಮ, ಅಕ್ಕನಾಗಮ್ಮ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಪಿ.ವಿ.ಪವನ್, ಎಚ್.ಬಿ. ಭರತ್, ಸುರೇಶ್, ಒಕ್ಕೂಟದ ವಿಸ್ತಿರಣಾಧಿಕಾರಿ ಭರತ್, ಗಂಗಾಧರ್ನಾಯ್ಕ ಮತ್ತಿತರಿದ್ದರು.
ಸಹಕಾರ ಸಂಘಗಳು ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತವಾಗದೆ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಗ್ರಾಮೀಣ ಬದುಕಿಗೆ ಆಸರೆಯಾಗಿವೆ. ರೈತರ ಆರ್ಥಿಕ ಸ್ವಾವಲಂಬನೆ ಹಾಗೂ ಹೈನುಗಾರಿಕೆ ಅಭಿವೃದ್ಧಿಗೆ ಸಹಕಾರ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ. ನಾನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಜಾತಿ ಧರ್ಮ ಮೀರಿ ಸಹಕಾರಿ ತತ್ವಗಳಿಗನುಸಾರವಾಗಿ ಸಹಕಾರಿ ಸಂಘಗಳ ಅಭಿವೃದ್ದಿಗೆ ಒತ್ತುಕೊಡಲಾಗಿದೆ.ಬೆಳ್ಳಿಪ್ರಕಾಶ್ ಅಪೆಕ್ಸ್ ಬ್ಯಾಂಕ್ ನಿರ್ದೇಶಕ