ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಯನ್ನು ತಹಸೀಲ್ದಾರ್ ಡಾ.ನೂರುಲ್‌ಹುದಾ ಉದ್ಘಾಟಿಸಿದರು.
ಎನ್.ಆರ್.ಪುರ: ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಕೊಡುಗೆ ಅಪಾರ ಎಂದು ಸಿವಿಲ್ ನ್ಯಾಯಾಧೀಶ ಆರ್.ಎಸ್.ಜೀತು ಹೇಳಿದರು.
ಪಪಂ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಹಾಯಕ ಅಭಿಯೋಜನಾ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದ ಕಾರ್ಮಿಕರ ಹಿತ ಕಾಪಾಡಲು ಸಮಾನ ಕೆಲಸಕ್ಕೆ ಸಮಾನ ವೇತನ, ಕಾರ್ಮಿಕರ ದೌರ್ಜನ್ಯ ತಡೆಗಟ್ಟುವ, ಕೆಲಸ ಮಾಡುವ ಸ್ಥಳಗಳಲ್ಲಿ ಮೂಲ ಸೌಲಭ್ಯ ಒದಗಿಸುವುದು, ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆ ಸೌಲಭ್ಯ, ಮಗುವಿನ ಆರೈಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹಲವು ಕಾನೂನುಗಳನ್ನು ಸರ್ಕಾರ ಜಾರಿಗೆ ತರಲಾಗಿದೆ. ಕಾರ್ಮಿಕರ ಹಿತರಕ್ಷಣೆ ಈ ಕಾನೂನುಗಳ ಪ್ರಮುಖ ಉದ್ದೇಶವಾಗಿದೆ ಎಂದರು.
ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರು ಕೈಗಾರೀಕರಣ ಇಲ್ಲವೇ ವಿನಾಶ ಎಂಬ ಹೇಳಿಕೆ ನೀಡುವ ಮೂಲಕ ಹಲವು ಕೈಗಾರಿಕೆಗಳು, ಬ್ಯಾಂಕ್‌ಗಳನ್ನು ಸ್ಥಾಪಿಸಿ ದೇಶದ ಅಭಿವೃದ್ಧಿಗೆ ಭದ್ರಾಬುನಾದಿ ಹಾಕಿಕೊಟ್ಟರು. ಭಾರತ ಸ್ವಾತಂತ್ರ್ಯ ನಂತರ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಗೆ ಆದ್ಯತೆ ನೀಡಲಾಯಿತು. ಅಂದಿನ ಪ್ರಧಾನಿ ಜವಹಾರ್ ಲಾಲ್ ನೆಹರು ಕೈಗಾರಿಕೆಗಳ ಅಭಿವೃದ್ಧಿ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಎರಡನೇ ಪಂಚ ವಾರ್ಷಿಕ ಯೋಜನೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದರು. 1991ರಲ್ಲಿ ನೂತನ ಆರ್ಥಿಕ ನೀತಿ ಅಳವಡಿಸಿಕೊಂಡು ಉದಾರೀಕರಣ, ಖಾಸಗೀಕರಣ, ಜಾಗತೀಕರಣಕ್ಕೆ ಆದ್ಯತೆ ನೀಡಿದ ನಂತರ ಮುಕ್ತ ಮಾರುಕಟ್ಟೆಯಲ್ಲಿ ಕಾರ್ಮಿಕರು ಸ್ಪರ್ಧಾತ್ಮಕತೆ ಬೆಳೆಸಿಕೊಂಡು ಕೌಶಲ ಹೆಚ್ಚಿಸಿಕೊಳ್ಳಲು ಅವರಿಗೆ ಉತ್ತಮ ಕೌಶಲ ತರಬೇತಿ ನೀಡಲಾಗುತ್ತಿದೆ ಎಂದರು.
ಪಪಂ ಲೆಕ್ಕಾಧಿಕಾರಿ ಉಷಾ, ಮಮತಾ ನಾಗರಾಜ್ ಇದ್ದರು.