ಬಿ.ಕೆ.ಲಕ್ಷ್ಮಣ್ ಕುಮಾರ್ 
ಚಿಕ್ಕಮಗಳೂರು

ಮೂಡಿಗೆರೆಯಲ್ಲಿ ಸಮಾವೇಶ ನಡೆಸಿರುವುದು ನೈಜ ರೈತರು

ಮೂಡಿಗೆರೆ: ಮೇ 23ರಂದು ಪಟ್ಟಣದ ರೈತ ಭವನದಲ್ಲಿ ಸಮಾವೇಶ ನಡೆಸಿರುವುದು ನೈಜ ರೈತರೇ ಹೊರತು ಭೂಗಳ್ಳರಲ್ಲ. ಕೆಲವರು ಪ್ರಚಾರಕ್ಕಾಗಿ ಭೂಗಳ್ಳರು ಸಮಾವೇಶ ನಡೆಸಿದ್ದಾರೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಕೆ.ಲಕ್ಷ್ಮಣ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ 611 ರೈತರ ಪಹಣಿ ವಜಾ ಮಾಡಲಾಗಿದೆ. ಇದರ ವಿರುದ್ಧ ನಮ್ಮ ಭೂಮಿ ನಮ್ಮಹಕ್ಕು ಎಂದು ಹೋರಾಟಕ್ಕಿಳಿದಿದ್ದೇವೆ. ವಜಾಗೊಳಿಸಿರುವ ಪಹಣಿಯನ್ನು ಮರು ಸ್ಥಾಪಿಸುವಂತೆ ಉಪವಿಭಾಗಾಧಿಕಾರಿ ಅವರನ್ನು ರೈತ ಹಿತರಕ್ಷಣಾ ವೇದಿಕೆಯಿಂದ ಭೇಟಿ ಮಾಡಿ ಒತ್ತಾಯಿಸಲಾಗಿತ್ತು. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರಿಂದ ಹೈಕೋರ್ಟ್ ಮೊರೆ ಹೋಗಬೇಕಾಯಿತು.ರೈತರ ಜಮೀನಿನ 611 ಪಹಣಿ ವಜಾಗೊಳಿಸಿದ್ದಕ್ಕೆ ಹೈಕೋರ್ಟ ತಡೆ ನೀಡಿದೆ. ಈ ಬಗ್ಗೆ ಸಮಾವೇಶ ನಡೆಸಲಾಗಿದೆ. ಅದು ರಾಜಕೀಯ ಪ್ರೇರಿತ ಸಮಾವೇಶವಲ್ಲ ಎಂದರು.
ಶಾಸಕರು, ಸಂಸದರು ಸೇರಿದಂತೆ ಯಾರೊಬ್ಬ ಜನಪ್ರತಿನಿಧಿಯನ್ನು ಆಹ್ವಾನಿಸಿರಲಿಲ್ಲ. ರೈತರು ಮಾತ್ರ ಒಟ್ಟಾಗಿ ಸಮಾವೇಶ ನಡೆಸಿ ಅತಂತ್ರ ಸ್ಥಿತಿಯಲ್ಲಿರುವ ರೈತರಿಗೆ ತೊಂದರೆ ನೀಡದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ನೈಜ ರೈತರು ನಡೆಸಿರುವ ಸಮಾವೇಶವನ್ನು ಭೂಗಳ್ಳರು ಸಮಾವೇಶ ನಡೆಸಿದ್ದಾರೆ ಎಂದು ಬಿಂಬಿಸಿರುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ವೇದಿಕೆ ಮುಖಂಡ ಅನಿಲ್ ಗುರುದೇವ್ ಮಾತನಾಡಿ, ದೇವರುಂದ ಗ್ರಾಮದ ರೈತ ಬಾಬು ಎಂಬುವರಿಗೆ ಭೂ ರಹಿತರು ಎಂಬ ಆಧಾರದ ಮೇಲೆ ಸರ್ಕಾರ ನೀಡಿದ 1.30 ಎಕರೆ, ಪುಟ್ಟಮ್ಮ ಎಂಬುವರಿಗೆ ನೀಡಿದ 1.35 ಎಕರೆ, ಕುಂದೂರಿನ ರೈತ ಕುಟುಂಬಕ್ಕೆ ಸರ್ಕಾರ ನೀಡಿದ 4.38 ಎಕರೆ ದರ್ಖಾಸ್ ಜಾಗವನ್ನು ವಜಾ ಮಾಡಲಾಗಿದೆ. ಹಿಂದೆ ಕುಂದೂರು ಗ್ರಾಮದ ರೈತರನ್ನು ಅರಣ್ಯ ಭೂಮಿ ನೆಪದಲ್ಲಿ ಒಕ್ಕಲೆಬ್ಬಿಸಿದಾಗ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೆಲವರ ಜಾಗವನ್ನು ಉಳಿಸಿದ್ದರು ಅದನ್ನು ಈಗ ವಜಾಗೊಳಿಸಲಾಗಿದೆ. ಸರ್ಕಾರದ ಇಂತಹ ಧೋರಣೆಯಿಂದ ರೈತರು ಬೀದಿಗೆ ಬಿದ್ದಿದ್ದಾರೆ. ಅಂತಹ ರೈತರಿಗೆ ಧೈರ್ಯ ತುಂಬುವ ಹಾಗೂ ಸರ್ಕಾರವನ್ನು ಎಚ್ಚರಿಸಲು ಸಮಾವೇಶ ನಡೆಸಲಾಗಿದೆ. ರೈತರನ್ನು ಭೂಗಳ್ಳರೆಂದು ಹೀಯಾಳಿಸುವುದು ಸರಿಯಲ್ಲ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ದೇವರುಂದ ಗ್ರಾಮದ ಬಾಬು, ಪುಟ್ಟಮ್ಮ, ಪ್ರದೀಪ್ ಕುಂದೂರು ಇತರರಿದ್ದರು