ಪ್ರಮುಖ ಮುಖ್ಯಾಂಶಗಳು
ಕೊಪ್ಪ: ನರಸೀಪುರ ಗ್ರಾಮ ಪಂಚಾಯಿತಿ ಶ್ರೀ ಚಂಡಿಕೇಶ್ವರಿ ದೇವಾಲಯದ ಹೊರ ಆವರಣದಲ್ಲಿನ ಶಾಸನ ಸಹಿತ ಸ್ಮಾರಕಶಿಲೆಯನ್ನು ದೇವಾಲಯದ ಆಡಳಿತ ಮಂಡಳಿ ಮನವಿ ಮೇರೆಗೆ ಕುವೆಂಪು ವಿಶ್ವವಿದ್ಯಾಲಯ ವಸ್ತು ಸಂಗ್ರಹಾಲಯದ ಕ್ಯುರೇಟರ್ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ್ ಕಲ್ಕೆರೆ ಮರು ಅಧ್ಯಯನ ಮಾಡಿದ್ದಾರೆ.
ಶಾಸನ ಸಹಿತ ಸ್ಮಾರಕ ಶಿಲೆಯ ಮಾಹಿತಿಯನ್ನು ಎಪಿಗ್ರಾಫಿಯ ಕರ್ನಾಟಿಕ, ಸಂಪುಟ-12ರಲ್ಲಿ ಪ್ರಕಟ ಮಾಡಿದ್ದರೂ ಪ್ರಸ್ತುತ ಅಧ್ಯಯನದಿಂದ ಹೆಚ್ಚಿನ ಮಾಹಿತಿ ಬೆಳಕಿಗೆ ಬಂದಿದೆ. ತಾಲೂಕಿನ ಇತಿಹಾಸಕ್ಕೆ ಹೊಸ ವಿಚಾರಗಳು ಸೇರ್ಪಡೆಗೊಂಡಿವೆ ಎಂದು ಸಂಶೋಧನಾರ್ಥಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೊದಲಿನ ಅಧ್ಯಯನದಲ್ಲಿ ಶಾಸನದಲ್ಲಿ ಗಂಗೆಮ್ಬ, ಭೀರವೂರ, ಕಲಿಮರ ಪದಗಳ ಉಲ್ಲೇಖವಿದ್ದು ಇದೊಂದು ರಕ್ತ ಶಿಲಾಶಾಸನ ಎಂದು ಹೇಳಲಾಗಿತ್ತು. ಆದರೆ ಮರು ಅಧ್ಯಯನದಿಂದ ಈ ಶಾಸನ ಸಹಿತ ಸ್ಮಾರಕಶಿಲೆಯು ಸಿಡಿತಲೆ ಕಲ್ಲು ಎಂದು ಕಂಡುಬಂದಿದೆ. ಅಂದರೆ ಒಬ್ಬ ವೀರನು ಅಥವಾ ರಾಜ ರಾಜ್ಯಕ್ಕಾಗಿ ಸ್ವಇಚ್ಛೆಯಿಂದ ಶಿರವನ್ನು ಕಡಿದು ಪ್ರಾಣ ತ್ಯಾಗ ಮಾಡಿರುವುದು. ಇದನ್ನು ಬೇರೆ ಬೇರೆ ರೂಪದಲ್ಲಿಯೂ ತೋರಿಸಿದ್ದಾರೆ. ಪ್ರಸ್ತುತ ಇಲ್ಲಿರುವ ಸಿಡಿತಲೆ ಸ್ಮಾರಕ ಶಿಲೆ ಸುಮಾರು ಮೂರೂವರೆ ಅಡಿ ಎತ್ತರ ಹಾಗೂ ಎರಡು ಅಡಿ ಅಗಲ ಹೊಂದಿದೆ. 8ನೇ ಶತಮಾನದ ಅಂದರೆ ರಾಷ್ಟ್ರಕೂಟ ಕಾಲದ ಕನ್ನಡ ಲಿಪಿಯ ಶಾಸನ ಒಳಗೊಂಡಿದೆ. ಹಾಗಾಗಿ ಈ ಪ್ರದೇಶದಲ್ಲಿ ರಾಷ್ಟ್ರಕೂಟರ ಸಮಕಾಲೀನ ರಾಜವಂಶ, ಸಾಮಂತ ಅರಸರು ಆಳ್ವಿಕೆ ಮಾಡಿರುವುದು ದೃಢಪಡುತ್ತದೆ ಎಂದು ತಿಳಿಸಿದ್ದಾರೆ.
ಸ್ವಸ್ತಿಶ್ರೀ ಎಂಬ ಶುಭಸೂಚಕದಿಂದ ಪ್ರಾರಂಭವಾಗುವ ಈ ಶಾಸನಸಹಿತ ಸಿಡಿತಲೆ ಸ್ಮಾರಕ ಶಿಲೆಯು, ದೇವರ ರೂಪವಾದ ಅರಸರಿಗೆ, ದೇವತಿ ಅರಸರಿಗೆ ಗಂಗ ಎಂಬ ವೀರನು, ಶಿರವನ್ನು ಸ್ವಇಚ್ಛೆಯಿಂದ ಊರ ಭಟರ ಮುಂದೆ ಹರಕೆ ರೂಪದಲ್ಲಿ ಸಮರ್ಪಿಸಿದ್ದು, ಈತ ಮಾಡಿದ ಈ ಪ್ರಾಣ ಬಲಿದಾನದ ನೆನಪು ಅಜರಾಮರವಾಗಿ ಉಳಿಯಲೆಂದು ಕಲಿಮರರು ಅಂದರೆ ಯುದ್ಧಕಲೆಯ ಪಾಂಡಿತ್ಯ ಬಲ್ಲವರು, ಈತನ ಪರಿವಾರದವರೇ ವೀರನ (ಗಂಗನ) ಮೂರ್ತಿಯನ್ನು ಕೆತ್ತಿಸಿ, ಅದರಲ್ಲಿ ಶಾಸನವನ್ನು ಬರೆಸಿ ಇಲ್ಲಿ ನೆಟ್ಟರು ಎಂದು ತಿಳಿಸುತ್ತದೆ. ಈ ಸ್ಮಾರಕ ಶಿಲೆಯ ಮೇಲ್ಭಾಗದಲ್ಲಿನ ಪಟ್ಟಿಕೆಯಲ್ಲಿ ಶಿರವನ್ನು ಹರಕೆ ರೂಪದಲ್ಲಿ ಕೊಟ್ಟಂತ ವೀರನಾದ ಗಂಗನು ಇಹಲೋಕದಿಂದ ಪರಲೋಕಕ್ಕೆ ಸೇರಿದ ಎಂಬುದನ್ನು ಸಾಂಕೇತಿಕವಾಗಿ ಮಂಟಪದಲ್ಲಿ ಕುಳಿತಿರುವಂತೆ ತೋರಿಸಲಾಗಿದೆ. ದೇವಾಲಯದ ಹೊರ ಆವರಣದಲ್ಲಿ ಸ್ಥಳೀಯರು ಸಿಡಿಕಟ್ಟೆ ಎಂದು ಕರೆಯುವ ಕಲ್ಲಿನಿಂದ ನಿರ್ಮಾಣ ಮಾಡಿದ ವೃತ್ತಾಕಾರದ ಕಟ್ಟೆಯಿದ್ದು, ಇಲ್ಲಿ ವೀರನಾದ ಗಂಗನು ಶಿರವನ್ನು ಕೊಟ್ಟಿರಬಹುದೆಂದು ಅಥವಾ ಆತ ಶಿರವನ್ನು ಕೊಟ್ಟ ಜಾಗದಲ್ಲಿ ನಂತರದಲ್ಲಿ ಕಟ್ಟೆ ಕಟ್ಟಿಸಿರಬಹುದೆಂದು ಊಹಿಸಬಹುದು. ಇಲ್ಲಿರುವ ಸ್ಮಾರಕ ಶಿಲೆಯನ್ನು ದೇವಾಲಯದ ಆಡಳಿತ ಮಂಡಳಿಯವರು, ಅರ್ಚಕರು, ಸ್ಥಳೀಯರು ಗಂಧ-ಪುಷ್ಪ, ಎಣ್ಣೆ-ಧೂಪದಿಗಳಿಂದ ಪೂಜಿಸಿ, ಸಂರಕ್ಷಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ವಿವರಿಸಿದ್ದಾರೆ.
ಶಾಸನಸಹಿತ ಸ್ಮಾರಕಶಿಲೆ ಮರು ಅಧ್ಯಯನದಲ್ಲಿ ಕಿಶನ್‌ಕುಮಾರ್, ಶ್ರೇಯಾ ಶ್ರುತೇಶ್ ಆಚಾರ್ಯ ಹಾಗೂ ದೇವಾಲಯದ ಆಡಳಿತ ಮಂಡಳಿ ಮತ್ತು ಸ್ಥಳೀಯರು ಸಹಕಾರ ನೀಡಿದ್ದಾರೆ ಎಂದು ಹೇಳಿದ್ದಾರೆ.