ಕಳಸದ ಅಂಬಾತೀರ್ಥ ಸಮೀಪದ ತೂಗು ಸೇತುವೆಗೆ ಪ್ರವಾಸಿಗರ ವಾಹನ ಬರದಂತೆ ಬ್ಯಾರಿಕೇಡ್ ಹಾಕಿರುವುದು.
ಕಳಸ: ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿರುವ ಕಳಸ ಅಂಬಾತೀರ್ಥದ ಭದ್ರಾ ನದಿ ಮೇಲಿನ ತೂಗು ಸೇತುವೆಯಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅನಿವಾರ್ಯವಾಗಿ ರಸ್ತೆಗೆ ಬ್ಯಾರಿಕೇಡ್ ಹಾಕಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ.
ಮುಮ್ಮಗೆ, ಕಲ್ಲುಗೋಡು ಹಾಗೂ ಅಂಬಾತೀರ್ಥ ಭಾಗದ ಗ್ರಾಮಸ್ಥರ ಅನುಕೂಲಕ್ಕಾಗಿ ನಿರ್ಮಿಸಿದ್ದ ಈ ತೂಗು ಸೇತುವೆ ಇದೀಗ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ನೂರಾರು ಪ್ರವಾಸಿಗರು ಸೇತುವೆ ವೀಕ್ಷಿಸಲು ಆಗಮಿಸುತ್ತಿದ್ದು ಅವರ ವಾಹನಗಳಿಂದಾಗಿ ಗ್ರಾಮಸ್ಥರ ನೆಮ್ಮದಿ ಹಾಳಾಗಿದೆ.
ತೂಗು ಸೇತುವೆ ಕಡೆಗೆ ಹೋಗುವ ಗ್ರಾಮೀಣ ರಸ್ತೆ ನಿರಂತರವಾಗಿ ಪ್ರವಾಸಿಗರ ವಾಹನಗಳ ಸಂಚಾರದಿಂದ ಸಂಪೂರ್ಣ ಹದಗೆಟ್ಟಿದೆ. ಮಳೆಗಾಲದಲ್ಲಿ ರಸ್ತೆ ಕೆಸರುಮಯವಾಗಿರುವುದರಿಂದ ಶಾಲಾ ಮಕ್ಕಳು, ವೃದ್ಧರು ಹಾಗೂ ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ಓಡಾಡುವ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಪ್ರವಾಸಿಗರು ತಮ್ಮ ವಾಹನಗಳನ್ನು ಗ್ರಾಮಸ್ಥರ ಮನೆಗಳ ಮುಂಭಾಗ, ರಸ್ತೆಯ ಬದಿಯಲ್ಲಿ ಹಾಗೂ ವಾಹನ ನಿಲುಗಡೆಗೆ ಸೂಕ್ತ ಸ್ಥಳವಲ್ಲದ ಕಡೆಗಳಲ್ಲಿ ಮನಬಂದಂತೆ ನಿಲ್ಲಿಸುತ್ತಿರುವುದರಿಂದ ಮನೆಗಳಿಂದ ಹೊರಬರಲು, ವಾಹನಗಳನ್ನು ತೆಗೆದುಕೊಂಡು ಹೋಗಲು ಹಾಗೂ ದೈನಂದಿನ ಕೆಲಸಗಳಿಗೆ ತೆರಳಲಿಕ್ಕೂ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರ ಜತೆಗೆ ತೂಗು ಸೇತುವೆ ಮೇಲಿನ ವರ್ತನೆಯೂ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಒಂದೇ ಬಾರಿಗೆ 100-200 ಮಂದಿ ಸೇತುವೆ ಮೇಲೆ ಹತ್ತುವುದು, ಸೇತುವೆಯನ್ನು ಉದ್ದೇಶಪೂರ್ವಕವಾಗಿ ಅಲ್ಲಾಡಿಸುವುದು, ರೀಲ್ಸ್ ಹಾಗೂ ವಿಡಿಯೊಗಳನ್ನು ಚಿತ್ರೀಕರಿಸುವುದೂ ಸೇರಿದಂತೆ ಅಪಾಯಕಾರಿ ರೀತಿಯಲ್ಲಿ ಪ್ರವಾಸಿಗರು ವರ್ತಿಸುತ್ತಿದ್ದಾರೆ ಎನ್ನಲಾಗಿದೆ.