ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡಿದ ಪಠ್ಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಚಿಕ್ಕಮಗಳೂರು: ಸರ್ಕಾರ ಉಚಿತವಾಗಿ ಪಠ್ಯ ಪುಸ್ತಕವನ್ನು ಪದವಿ ಪೂರ್ವ ವಿದ್ಯಾರ್ಥಿಗಳಿಗೂ ನೀಡುತ್ತಿರುವುದು ಶಿಕ್ಷಣ ರಂಗದ ಹೊಸಹೆಜ್ಜೆಯಾಗಿದೆ. ವಿದ್ಯಾರ್ಥಿಗಳು ಪಡೆದ ಪುಸ್ತಕಕ್ಕೆ ನ್ಯಾಯ ಒದಗಿಸಬೇಕೆಂದರೆ ಎಲ್ಲರೂ ಉತ್ತಮ ಫಲಿತಾಂಶ ಪಡೆದು ಸಾಧನೆ ಮಾಡಬೇಕು ಎಂದು ಕಳಸಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಿಬಿಸಿ ಅಧ್ಯಕ್ಷ ಚೇತನ್ ಹೇಳಿದರು.
ತಾಲೂಕಿನ ಕಳಸಾಪುರ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡಿದ ಪಠ್ಯ ಪುಸ್ತಕ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ನಾನಾ ಆಕರ್ಷಣೆಗಳಿರುತ್ತವೆ. ಆದರೆ, ದೃಢಚಿತ್ತದಿಂದ, ಏಕಾಗ್ರತೆಯಿಂದ ಓದಿದಾಗ ಪರೀಕ್ಷೆ ಎದುರಿಸುವುದು ಸುಲಭವಾಗುತ್ತದೆ. ಆರ್ಥಿಕವಾಗಿ ಹಿಂದುಳಿದವರಿಗೆ ಈ ಪಠ್ಯ ಪುಸ್ತಕ ಕೊಡುಗೆ ನಿಜಕ್ಕೂ ವರದಾನವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಚ್.ಎಂ.ನಾಗರಾಜರಾವ್ ಮಾತನಾಡಿ, ಸರ್ಕಾರ ಉಚಿತವಾಗಿ ನೀಡುತ್ತಿರುವ ಪುಸ್ತಕ, ಸಮವಸ್ತ್ರ, ಪಠ್ಯ ಪುಸ್ತಕ, ಬಿಸಿಯೂಟ, ಹಾಲು - ಇವುಗಳನ್ನೆಲ್ಲ ಪಡೆಯುತ್ತಿರುವ ವಿದ್ಯಾರ್ಥಿಗಳು ನಹಿ ಜ್ಞಾನೇನ ಸದೃಶಮ್ ಎಂಬುದನ್ನು ಅರ್ಥ ಮಾಡಿಕೊಂಡು ಓದಿ ಮುಂದೆ ಬರಬೇಕು ಮತ್ತು ತಾವೂ ಓದುವ ಆಸಕ್ತಿ ಇರುವವರಿಗೆ ನೆರವಾಗಬೇಕು. ಪುಸ್ತಕದ ಜ್ಞಾನ ಮಸ್ತಕಕ್ಕೆ ಸೇರಿ, ಅದು ಕ್ರಿಯಾರೂಪಕ್ಕಿಳಿದಾಗ ಮಾತ್ರ ಅದಕ್ಕೆ ಬೆಲೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಿ.ಬಿ.ಸಿ. ಸದಸ್ಯ ಗುರುಪ್ರಸಾದ್, ಉಪನ್ಯಾಸಕಿ ಸುಕನ್ಯ ಜಿ.ಬಿ., ಕಾವ್ಯ ಕೆ.ಬಿ.ಹಾಳ್, ಭೂಮಿಕಾ ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕ ಶಾಂತಕುಮಾರ್ ಎಚ್.ಜಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಾಜೇಶ್ ವಿ.ಕೆ. ವಂದಿಸಿದರು.