ಕಡೂರಿನ ಹೈವೇ ಇಂಗ್ಲೀಷ್ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವವನ್ನು ಬಿಇಒ ಎಂ.ಎಚ್.ತಿಮ್ಮಯ್ಯ ಉದ್ಘಾಟಿಸಿದರು. ಬಿ.ಶಿವಕುಮಾರ್, ಡಾ. ದೀಪಕ್, ನಾರಾಯಣಸ್ವಾಮಿ, ಗುರುಪ್ರಸಾದ್, ಗಣೇಶ ಶಾಲಿಯಾನ ಇತರರಿದ್ದರು.
ಕಡೂರು: ಮಕ್ಕಳಿಗೆ ಪಠ್ಯ ಕಲಿಕೆಯ ಜತೆಯಲ್ಲಿ ವಿವೇಕತನ ಕಲಿಸುವ ಹೊಣೆಗಾರಿಕೆ ಪಾಲಕರ ಮೇಲಿದೆ ಎಂದು ಬಿಇಒ ಎಂ.ಎಚ್.ತಿಮ್ಮಯ್ಯ ಹೇಳಿದರು.
ಪಟ್ಟಣದ ಹೈವೆ ಇಂಗ್ಲೀಷ್ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪಾಲಕರು, ಗುರುಗಳು ಸಮಾಜದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾರೆ. ಗುರುಗಳು ಪಾಠದ ಜತೆ ಮಕ್ಕಳಿಗೆ ಜ್ಞಾನ ನೀಡಬೇಕು. ಪಾಲಕರು ಮಕ್ಕಳಿಗೆ ಅತಿಯಾದ ಪ್ರೀತಿ ತೋರುವುದರ ಜತೆಗೆ ವಿವೇಕ ಕಲಿಸಬೇಕು. ಪರೀಕ್ಷೆ ಸಮಯದವರೆಗೂ ಮಕ್ಕಳನ್ನು ಮೊಬೈಲ್, ಟಿವಿಯಿಂದ ದೂರ ಇರಿಸಬೇಕು. ಮಕ್ಕಳಿಗಾಗಿ ಪಾಲಕರು ಸಹ ಟಿವಿ ಹಾಗೂ ಮೊಬೈಲ್‌ಗಳಿಂದ ದೂರವಿದ್ದರೆ ಒಳಿತು ಎಂದು ತಿಳಿಸಿದರು.
ಮಕ್ಕಳಿಗೆ ಒತ್ತಡ ಹಾಕುವ ಪಾಲಕರು ಇದ್ದಾರೆ. ಇದರ ಬದಲು ಮಕ್ಕಳ ಜತೆ ಹೆಚ್ಚು ಸಮಯ ಕಳೆಯಬೇಕು. ಅವರಿಗೆ ಉತ್ತಮ ಕಥೆ ಹೇಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ಎಲ್ಲ ಮಕ್ಕಳಲ್ಲೂ ಪ್ರತಿಭೆ ಇದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಬೇರೆ ಮಕ್ಕಳ ಜತೆ ಹೋಲಿಕೆ ಮಾಡಬಾರದು. ಸೋಲನ್ನು ಎದುರಿಸುವ ಶಕ್ತಿಯನ್ನು ಮಕ್ಕಳಿಗೆ ಕಲಿಸಬೇಕಿದೆ ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಶಿವಕುಮಾರ್ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಮುಖ್ಯ. ಪಾಲಕರು ಮಕ್ಕಳ ಚಲನವಲನಗಳನ್ನು ಗಮನಿಸಬೇಕಿದೆ. ಪಾಠ ಪ್ರವಚನದ ಜತೆ ಸಮಾಜದಲ್ಲಿನ ನಡವಳಿಕೆಯೂ ಮುಖ್ಯ. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವುದರಿಂದ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಗಣೇಶ ಶಾಲಿಯಾನ ವಾರ್ಷಿಕ ವರದಿ ಮಂಡಿಸಿದರು. ಶಾಲಾ ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಎಸ್.ವಿ.ದೀಪಕ್, ಜಿ.ಎಸ್.ಗುರುಪ್ರಸಾದ್, ಡಿ.ನಾರಾಯಣಸ್ವಾಮಿ, ಶಿಕ್ಷಕಿ ಮಾಲಾ, ಮಂಜುನಾಥ್ ಇತರರಿದ್ದರು.