ಬಾಳೆಹೊನ್ನೂರಿನ ಸಂಗಮೇಶ್ವರ ಪೇಟೆಯಲ್ಲಿ ಜೇನು ಪೆಟ್ಟಿಗೆ, ಟೈಲರಿಂಗ್ ಯಂತ್ರವನ್ನು ಶಾಸಕ ಟಿ.ಡಿ.ರಾಜೇಗೌಡ ವಿತರಿಸಿದರು. ಚಂದ್ರೇಗೌಡ, ಮಂಜುನಾಥ್, ಗಣೇಶ್, ಆಶಾ, ಪಲ್ಲವಿ, ದಿನೇಶ್ ಇದ್ದರು.
ಬಾಳೆಹೊನ್ನೂರು: ಸರ್ಕಾರದಿಂದ ಫಲಾನುಭವಿಗಳಿಗೆ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉನ್ನತಿ ಹೊಂದಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಸಂಗಮೇಶ್ವರಪೇಟೆಯಲ್ಲಿ ಕೆಆರ್‌ಇಡಿಎಲ್‌ನ ಸಿಎಸ್‌ಆರ್ ನಿಧಿಯಲ್ಲಿ ಜೇನು ಕೃಷಿ ಫಲಾನುಭವಿಗಳಿಗೆ ಜೇನು ಪೆಟ್ಟಿಗೆ, ಮಹಿಳೆಯರಿಗೆ ಟೈಲರಿಂಗ್ ಯಂತ್ರಗಳನ್ನು ವಿತರಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ಮೂಲಕ ಜೀವನ ಭದ್ರತೆ ಹೊಂದಬೇಕು ಎಂದರು.
ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದಿಂದ ಜಿಲ್ಲೆಗೆ ಸಾಕಷ್ಟು ಅನುದಾನ, ಸಿಎಸ್‌ಆರ್ ನಿಧಿಗಳನ್ನು ನೀಡಲಾಗಿದ್ದು, ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ನಾನು ಶಾಸಕನಾದ ಕ್ಷೇತ್ರಾದ್ಯಂತ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದು, ಜಾತಿ, ಧರ್ಮ, ಪಕ್ಷ ಬೇಧ ಮಾಡದೆ ಕಾರ್ಯನಿರ್ವಹಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಮುಂದಿನ ದಿನಗಳಲ್ಲಿ ಸಹ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪಿಎಸಿಎಸ್ ಅಧ್ಯಕ್ಷ ಕೆ.ಎಲ್.ಚಂದ್ರೇಗೌಡ, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಬಿ.ಸಿ.ಮಂಜುನಾಥ್, ಪ್ರಮುಖರಾದ ಗಣೇಶ್ ಕುಂಬರಕೋಡು, ಆಶಾ ನಾರಾಯಣಗೌಡ, ಪಲ್ಲವಿ, ದಿನೇಶ್ ಕುಂಬರಕೋಡು ಮತ್ತಿತರರು ಹಾಜರಿದ್ದರು.