ಕಡೂರಿನ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಹಾಸ್ಟೆಲ್ ವಿದ್ಯಾರ್ಥಿನಿ ವೈ.ಎಲ್.ನವ್ಯಾಗೆ ಸಮಾಜ ಕಲ್ಯಾಣಾಧಿಕಾರಿ ನಟರಾಜ್ ಟ್ಯಾಬ್ ವಿತರಿಸಿದರು. 
ಚಿಕ್ಕಮಗಳೂರು

ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಟ್ಯಾಬ್

ಜಿ.ಹೆಚ್. ಧನ್ಯಕುಮಾರ್
ಕಡೂರು: ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ 13 ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡಿದ ಎಸ್‌ಎಸ್‌ಎಲ್ಸಿಯ 142 ವಿದ್ಯಾರ್ಥಿಗಳಲ್ಲಿ 134 ಜನ ವಿದ್ಯಾರ್ಥಿಗಳು ತೇರ್ಗಡೆಹೊಂದಿ ಶೇ.95 ರಷ್ಟು ಫಲಿತಾಂಶ ಲಭಿಸಿದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ.ನಟರಾಜ್ ತಿಳಿಸಿದರು.
ಪಟ್ಟಣದ ಕಚೇರಿಯಲ್ಲಿ ಶುಕ್ರವಾರ ಇಲಾಖೆ ವಸತಿ ನಿಲಯದಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಗೆ ಟ್ಯಾಬ್ ವಿತರಿಸಿ ಮಾತನಾಡಿ, ಈ ಬಾರಿಯ ಫಲಿತಾಂಶದಲ್ಲಿ ನಾಲ್ವರು ಅತ್ಯುನ್ನತ, ಪ್ರಥಮ 62, ದ್ವಿತೀಯ 48, ತೃತೀಯ 20 ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ ಎಂದರು.
ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ವಸತಿ ನಿಲಯದ ಬಾಲಕ ಮತ್ತು ಬಾಲಕಿಯ ಇಬ್ಬರು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಟ್ಯಾಬ್ ನೀಡುವ ಮೂಲಕ ಶೈಕ್ಷಣಿಕವಾಗಿ ಉತ್ತೇಜನ ನೀಡಲು ಗುರಿ ರೂಪಿಸಿಕೊಳ್ಳಲಾಗಿತ್ತು. ಅದರಂತೆ ಜೋಡಿಹೋಚಿಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಶಿವುನಾಯ್ಕ 550 ಮತ್ತು ಬೀರೂರಿನ
ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿ ವೈ.ಎಲ್ ನವ್ಯ 534 ಅಂಕಗಳನ್ನುಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಇಬ್ಬರು ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಗಿದೆ. ಸಿಂಗಟಗೆರೆ ಗ್ರಾಮದ ಗಿರಿಜನ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಕೆ. ಪ್ರೀತಮ್ 549 ಅಂಕಗಳಿಸಿದ ಹಿನ್ನೆಲೆಯಲ್ಲಿ 5ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಲಾಗಿದೆ ಎಂದರು.
ನಿಲಯದ ಮೇಲ್ವಿಚಾರಕರಾದ ಮಮತಾ, ಸೋಮೇಶ್ವರ ಪ್ರಸನ್ನ, ಚಂದ್ರಯ್ಯ, ಇಲಾಖೆಯ ಸಿಬ್ಬಂದಿಗಳಾದ ಕವಿತಾ, ನಿತ್ಯಾನಂದ್ ಇದ್ದರು.