ಚೌಳಹಿರಿಯೂರಿನ ಶ್ರೀ ಸ್ವರ್ಣಗೌರಿ ಹಾಗೂ ಶ್ರೀ ರುದ್ರೇಶ್ವರ ಸ್ವಾಮಿ ಸಮುದಾಯ ಭವನವನ್ನು ಎಡೆಯೂರಿನ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಹಾಲಪ್ಪ , ನಾಗರಾಜ್‌ರಾವ್ ಮತ್ತಿತರರಿದ್ದರು. 
ಚಿಕ್ಕಮಗಳೂರು

ಧರ್ಮ ಪರಿಪಾಲನೆಯಲ್ಲಿ ಭಾರತಕ್ಕೆ ಮಹತ್ವ

ಜಿ. ಗಜೇಂದ್ರ
ಚೌಳಹಿರಿಯೂರು: ಧರ್ಮ ಪರಿಪಾಲನೆಯಲ್ಲಿ ಭಾರತ ಮಹತ್ವದ ಪಾತ್ರ ವಹಿಸಿರುವುದರಿಂದ ಬೇರೆ ರಾಷ್ಟ್ರಗಳ ಪ್ರಕಾರ ಭಾರತ ಪೂಜಾಮನೆ ಇದ್ದಂತೆ ಎಂದು ಎಡೆಯೂರಿನ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸ್ಥಳೀಯ ಸ್ವರ್ಣಗೌರಿ ಹಾಗೂ ಶ್ರೀ ರುದ್ರೇಶ್ವರ ಸ್ವಾಮಿ ನೂತನ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಅಬ್ದುಲ್‌ಕಲಾಂ ಅವರು ಹಿಂದೂ ಧರ್ಮವನ್ನು ಒಪ್ಪಿಕೊಂಡವರು ಎಂದು ಶ್ಲಾಘಿಸಿದರು.
ಪ್ರಾಚಾರ್ಯ ಎಚ್.ಎಂ.ನಾಗರಾಜ್‌ರಾವ್ ಮಾತನಾಡಿ, ನಾನು ಸಮಾಜದೊಳಗೆ ಎಂಬ ಪ್ರಜ್ಞೆ ಮೂಡಿಸಿಕೊಳ್ಳುವವನೇ ಸತ್ಪ್ರಜೆಯಾಗಬಲ್ಲ. ದೇವಾಲಯ, ಸಮುದಾಯ ಭವನಗಳು ಸಾತ್ವಿಕತೆಯ ಸಂಕೇತವಾಗಬೇಕಿದೆ. ಭಾರತೀಯ ಧರ್ಮ ಅಂತರಂಗದ ಸಂಸ್ಕೃತಿಯಾಗಬೇಕಿದೆ. ಸ್ವರ್ಣಗೌರಿ ಆಚರಣೆಯನ್ನು ವಿವರವಾಗಿ ತಿಳಿಸಿದರು.
ಪ್ರಥಮ ದರ್ಜೆ ಗುತ್ತಿಗೆದಾರ ಸಿ.ಹಾಲಪ್ಪ ಮಾತನಾಡಿ, ರೈತರ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಇದನ್ನು ಮನಗಂಡು ಚುನಾಯಿತ ಪ್ರತಿನಿಧಿಗಳ ಸಹಕಾರದಿಂದ ಯಾವುದೇ ತಾರತಮ್ಯವಿಲ್ಲದೆ ಗ್ರಾಮದಲ್ಲಿ ಬಹಳಷ್ಟು ಕಾಮಗಾರಿಗಳನ್ನು ಮಾಡುತ್ತ್ತಿದ್ದೇವೆ. ಅದರಲ್ಲೂ ಕುರುಬರಹಳ್ಳಿಯಲ್ಲಿ ಹೊಸ ಕೆರೆ ನಿರ್ಮಾಣ ಸಹ ಪ್ರಾರಂಭಿಸಿದ್ದೇವೆ ಎಂದರು.
ಬಿಜೆಪಿ ಮಹಿಳಾ ಯುವ ಮೋರ್ಚಾ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಇಂಥ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಹೆಚ್ಚಾಗಿ ತೊಡಗಿಸುವುದರಿಂದ ಧರ್ಮ ಉಳಿಯುತ್ತದೆ ಎಂದರು.
ಜೂನಿಯರ್ ಅಂಬರೀಷ್, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಆರ್.ನಾಗೇಶ್, ಲಿಂಗದಹಳ್ಳಿ ಗಿರೀಶ್, ಆರೋಗ್ಯ ಇಲಾಖೆಯ ಯೋಗೀಶ್, ಬೆಂಗಳೂರಿನ ರವಿ, ಬಿ.ಇ.ವಿಜಯ್ ಇವರಿಂದ ಸಂಗೀತ ಗಾಯನ ನಡೆಯಿತು. ಪ್ರಮುಖರಾದ ಸಿ.ಎಸ್.ಪಾವನಾ, ಎಚ್.ಎಂ.ಶಶಿಧರ, ಎಚ್.ಕೆ.ಸತೀಶ್, ರೇಣುಕಾಶೆಟ್ರು, ಗುಮ್ಮನಹಳ್ಳಿ ಅಶೋಕ್, ಎಚ್.ಕೆ.ಸುಂದ್ರೇಶ್ ಇತರರಿದ್ದರು.