ಬಾಳೆಹೊನ್ನೂರು ಸಮೀಪದ ಸೀಗೋಡಿನಲ್ಲಿ ಸ್ವರ್ಣ ಮೇದಿನಿ ಚಿತ್ರದ ಎರಡನೇ ಪೋಸ್ಟರನ್ನು ನಿರ್ಮಾಪಕ ಚಂದ್ರಗಿರಿ ದಿನೇಶ್ ಬಿಡುಗಡೆಗೊಳಿಸಿದರು. ಪ್ರದೀಪ್ ಹೆಬ್ಬಾರ್, ಕಾರ್ತಿಕ್, ಅಪರ್ಣಾ, ಅನುಷಾ, ಅಕ್ಷಯ್, ಮಂಜುನಾಥ್, ಅನುಪಮಾ ಇತರರಿದ್ದರು. 
ಚಿಕ್ಕಮಗಳೂರು

ಮಲೆನಾಡಿನ ನೈಜ ಜೀವನದ ಕಥೆ ಸ್ವರ್ಣ ಮೇದಿನಿ

ಬಾಳೆಹೊನ್ನೂರು: ಮಲೆನಾಡಿನ ನೈಜ ಜೀವನದ ಕಥೆಯನ್ನು ಹೆಣೆದು ಚಂದ್ರಗಿರಿ ಸಿನಿ ಪ್ರೊಡಕ್ಷನ್‌ನಿಂದ ಚೊಚ್ಚಲ ಚಿತ್ರವಾಗಿ ಸ್ವರ್ಣ ಮೇದಿನ ಚಲನಚಿತ್ರವನ್ನು ನಿರ್ಮಾಣ ಮಾಡಲಾಗಿದೆ ಎಂದು ನಿರ್ಮಾಪಕ ಚಂದ್ರಗಿರಿ ದಿನೇಶ್ ತಿಳಿಸಿದರು.
ಸೀಗೋಡಿನ ನಾಗಲಕ್ಷ್ಮೀ ಸಭಾ ಭವನದಲ್ಲಿ ಸ್ವರ್ಣ ಮೇದಿನಿ ಚಲನಚಿತ್ರದ ಎರಡನೇ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಚಂದ್ರಗಿರಿ ಕಲಾ ಪ್ರತಿಷ್ಠಾನದ ಹೆಸರಿನೊಂದಿಗೆ ಆರಂಭಗೊಂಡ ನಮ್ಮ ತಂಡ ಆರಂಭದಲ್ಲಿ ರಂಗಭೂಮಿ, ಕಿರುಚಿತ್ರ, ಧಾರಾವಾಹಿಗಳ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದು ಪ್ರಸ್ತುತ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದೆ ಎಂದರು. 
ಮಲೆನಾಡಿಗರ ಜೀವನಾಧಾರಿತ ಕಥೆ ರಚಿಸಿ ಎಲ್ಲರೂ ಕುಳಿತು ಸಿನಿಮಾ ವೀಕ್ಷಿಸಬೇಕು ಎಂಬ ಉದ್ದೇಶದಿಂದ ಸ್ವರ್ಣ ಮೇದಿನಿ ಎಂಬ ಕೌಟುಂಬಿಕ ಚಿತ್ರ ನಿರ್ಮಿಸಲಾಗಿದೆ. ಒಂದೂವರೆ ವರ್ಷಗಳ ಹಿಂದೆ ಸಿನಿಮಾ ಚಿತ್ರೀಕರಣ ಆರಂಭಗೊಂಡಿದ್ದು ಪ್ರಸ್ತುತ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದೆ. ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಸಿನಿಮಾ ತೆರೆ ಕಾಣಲಿದೆ. ಪ್ರತಿ ಜಿಲ್ಲೆಗೆ ಚಿತ್ರ ತಂಡ ಭೇಟಿ ನೀಡಿ ಸಿನಿ ರಸಿಕರನ್ನು ಭೇಟಿ ಮಾಡಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುವಂತೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು. 
ನಿರ್ದೇಶಕ ಎಂ.ಪಿ.ಪ್ರದೀಪ್ ಹೆಬ್ಬಾರ್ ಮಾತನಾಡಿ, ಸ್ಥಳೀಯ ಕಲಾವಿದರಿಗೆ ಉತ್ತಮ ವೇದಿಕೆ ಒದಗಿಸಬೇಕು ಎಂಬ ಉದ್ದೇಶದಿಂದ ಸ್ವರ್ಣ ಮೇದಿನಿ ಎಂಬ ವಿಶೇಷ ಕಥೆಯುಳ್ಳ ಚಿತ್ರವನ್ನು ನಿರ್ಮಿಸಿದ್ದು ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಚಿತ್ರದಲ್ಲಿ ಕಾರ್ತಿಕ್, ಅಕ್ಷಯ್ ವಿಭು (ನಾಯಕ ನಟ), ಅಪರ್ಣಾ ಡಿ. ಭಟ್, ಅನುಷಾ ಡಿ. ಭಟ್ (ನಾಯಕ ನಟಿ), ರಾಘವೇಂದ್ರ ರೈ, ಶಿವಪ್ರಸಾದ್ ಆಚಾರ್ಯ, ಶೃಂಗೇರಿ ರಾಮಣ್ಣ, ಸುರಭಿ, ಕಾವ್ಯಶ್ರೀ ಅಡಿಗ, ಕೀರ್ತನ್, ಮಂಜುನಾಥ್ ತುಪ್ಪೂರು ಮತ್ತಿತರರು ಸಹ ಕಲಾವಿದರಾಗಿ ಬಣ್ಣ ಹಚ್ಚಿದ್ದಾರೆ ಎಂದು ತಿಳಿಸಿದರು.
ನಾಯಕ ನಟ ಕಾರ್ತಿಕ್ ಮಾತನಾಡಿ, ಸ್ವರ್ಣ ಮೇದಿನಿ ಚಿತ್ರದ ಯಶಸ್ಸಿಗಾಗಿ ಇಡೀ ಚಿತ್ರ ತಂಡ ಕಾರ್ಯನಿರ್ವಹಿಸುತ್ತಿದ್ದು ಸಿನಿ ಪ್ರೇಮಿಗಳಿಗೆ ಮನರಂಜನೆ ನೀಡಬೇಕು ಎಂಬ ಉದ್ದೇಶದಿಂದ ನಿರಂತರವಾಗಿ ಕೆಲಸ ಮಾಡಲಾಗಿದೆ ಎಂದರು. ಅಪರ್ಣಾ, ಅನುಷಾ, ವೀಣಾ, ಮಂಜುನಾಥ್ ತುಪ್ಪೂರು, ಅಕ್ಷಯ್ ಮತ್ತಿತರರಿದ್ದರು.