ಬಜೆಟ್ ಅಧಿವೇಶನ ಕುರಿತು ನವದೆಹಲಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಜತೆ ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಪಾಲ್ಗೊಂಡಿದ್ದರು.
ಕೊಪ್ಪ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎನ್‌ಡಿಎ ಮೈತ್ರಿಕೂಟದ ನಾಯಕರೊಂದಿಗೆ ಬಜೆಟ್ ಅಧಿವೇಶನ ಕುರಿತು ನವದೆಹಲಿಯಲ್ಲಿ ಭಾನುವಾರ ಸಮಗ್ರ ಸಂವಾದ ನಡೆಸಿದ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಹಿರಿಯ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಪಾಲ್ಗೊಂಡಿದ್ದರು.
ಬಜೆಟ್‌ನ ಪೂರ್ಣ ಅಂಶಗಳು, ದೀರ್ಘಾವಧಿ ದೃಷ್ಟಿಕೋನದ ಯೋಜನೆಗಳು ಹಾಗೂ ದೇಶದ ಆರ್ಥಿಕ-ಸಾಮಾಜಿಕ ಅಭಿವೃದ್ಧಿಗೆ ರೂಪಿಸಿರುವ ತೀರ್ಮಾನಗಳ ಬಗ್ಗೆ ವಿವರವಾಗಿ ಚರ್ಚೆ ನಡೆಯಿತು. ಮೈತ್ರಿ ಸರ್ಕಾರದ ಮೂಲಕ ಆಡಳಿತ ನಡೆಸುತ್ತಿರುವ ಹಿನ್ನೆಲೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಗೌರವದಿಂದ ಆಲಿಸುವುದು ಸರ್ಕಾರದ ಕಾರ್ಯಶೈಲಿ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿರುವುದಾಗಿ ಸುಧಾಕರ ಶೆಟ್ಟಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆಗಳು ಹಾಗೂ ಬಜೆಟ್‌ನ ಉದ್ದೇಶಗಳನ್ನು ಸುದ್ದಿಗೋಷ್ಠಿಗಳು ಮತ್ತು ಸಾರ್ವಜನಿಕ ಸಭೆಗಳ ಮೂಲಕ ತಳಮಟ್ಟದ ಜನರಿಗೆ ತಲುಪಿಸುವ ಜವಾಬ್ದಾರಿ ಮೈತ್ರಿ ಪಕ್ಷಗಳ ನಾಯಕರ ಮೇಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ ಎಂದು ಮಾಹಿತಿ ನೀಡಿದರು. ಸಂವಾದ ಕಾರ್ಯಕ್ರಮದಲ್ಲಿ ಸಂಸದ ಅನುರಾಗ್ ಠಾಕೂರ್, ಜೆಡಿಎಸ್ ಪರವಾಗಿ ಪಕ್ಷದ ಪ್ರಮುಖ ನಾಯಕ ದೇವರಾಜ್ ಭಾಗವಹಿಸಿದ್ದರು.