ಕಳಸದಲ್ಲಿ ಆಯೋಜಿಸಿದ್ದ ಸೌಹಾರ್ದ ಗಣೇಶೋತ್ಸವದ ಸಭಾ ಕಾರ್ಯಕ್ರಮವನ್ನು ಶಶಿದರ ಶೆಟ್ಟಿ ಬರೋಡಾ ಉದ್ಘಾಟಿಸಿದರು.  
ಚಿಕ್ಕಮಗಳೂರು

ಒಳ್ಳೆಯ ನಿರ್ಧಾರ ಕೈಗೊಂಡು ಪ್ರಾಮಾಣಿಕವಾಗಿ ಮುನ್ನಡೆದರೆ ಸಾಧನೆ ಖಚಿತ

ಕಳಸ: ಯಾವುದೇ ಕಾರ್ಯ ಕೈಗೊಳ್ಳಲು ಹಣಕ್ಕಿಂತ ದೃಢ ನಿರ್ಧಾರ ಮುಖ್ಯ. ಒಳ್ಳೆಯ ನಿರ್ಧಾರ ಕೈಗೊಂಡು ಪ್ರಾಮಾಣಿಕವಾಗಿ ಮುನ್ನಡೆದರೆ ಸಾಧನೆ ಖಚಿತ ಎಂಬುದಕ್ಕೆ ಕಳಸದ ಅರಮನೆಮಕ್ಕಿಯಲ್ಲಿ ನಿರ್ಮಾಣಗೊಂಡಿರುವ ಬೃಹತ್ ಸಭಾಭವನ ಸಾಕ್ಷಿಯಾಗಿದೆ ಎಂದು ಉದ್ಯಮಿ ಶಶಿಧರ ಶೆಟ್ಟಿ ಬರೋಡ ಹೇಳಿದರು.

ಕಳಸದ ಅರಮನೆಮಕ್ಕಿಯಲ್ಲಿ ನಡೆದ ಸೌಹಾರ್ದ ಗಣೇಶೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ಒಳ್ಳೆಯ ವಿಚಾರಗಳನ್ನು ಬೆಂಬಲಿಸಿದಾಗ ಗ್ರಾಮದ ಅಭಿವೃದ್ಧಿಗೆ ವೇಗ ಸಿಗುತ್ತದೆ. ಸಂಘಟನೆ ಹಾಗೂ ಸಮಾಜದ ಒಗ್ಗಟ್ಟಿನಿಂದ ದೊಡ್ಡ ಕಾರ್ಯಗಳನ್ನು ಯಶಸ್ವಿಯಾಗಿ ಕೈಗೊಳ್ಳಲು ಸಾಧ್ಯ. ದೇವರಿಗೆ ಹಣ, ಐಶ್ವರ್ಯ ಕೊಡು ಎಂದು ಬೇಡುವುದಕ್ಕಿಂತ ಸದಾ ನನ್ನ ಜೊತೆ ಇರು ಎಂದು ಬೇಡಿಕೊಂಡರೆ ಅದಕ್ಕಿಂತ ದೊಡ್ಡ ಸಂಪತ್ತಿಲ್ಲ ಎಂದರು.

ಸಮಿತಿ ಅಧ್ಯಕ್ಷ ಬಿ.ವಿ.ರವಿ ರೈ ಮಾತನಾಡಿ, ಕೇವಲ 50ದಿನಗಳಲ್ಲಿ ಬೃಹತ್ ದಕ್ಷಿಣ ಕಾಶಿ ಸಭಾ ಭವನ ನಿರ್ಮಾಣಗೊಂಡಿರುವುದು ಸೌಹಾರ್ದ ಗಣೇಶೋತ್ಸವ ಸಮಿತಿಯ ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ. ಭವನಕ್ಕೆ ಒಂದು ಕೋಟಿಗೂ ಅಧಿಕ ವೆಚ್ಚವಾಗಿದೆ. ಇದರಲ್ಲಿ ಶೇ.50ರಷ್ಟನ್ನು ಸಮಿತಿ ಕಾರ್ಯಕರ್ತರು ಭರಿಸಿರುವುದು ವಿಶೇಷ. ಮೂರು ವರ್ಷಗಳ ಹಿಂದೆ ಆರಂಭಗೊಂಡ ಸೌಹಾರ್ದ ಗಣೇಶೋತ್ಸವ ಇಂದು ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದೆ. ಸಂಘಟನೆ ಗಟ್ಟಿಯಾಗಿದ್ದು, ಯುವಕರ ಪಡೆ ಜತೆಯಲ್ಲಿದ್ದರೆ ಅಸಾಧ್ಯವೆನಿಸುವ ಕಾರ್ಯವನ್ನೂ ಸಾಧಿಸಬಹುದು ಎಂಬುದಕ್ಕೆ ಸೌಹಾರ್ದ ಗಣೇಶೋತ್ಸವ ನಿದರ್ಶನ ಎಂದರು.

ಕಳಸ ಪ್ರಥಮ ದರ್ಜೆ ಕಾಲೇಜಿನ ಪ್ರಚಾರ್ಯ ವಿನಯ ಕುಮಾರ್ ಶೆಟ್ಟಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದುಷಾ ಜೈನ್ ಅವರನ್ನು ಸನ್ಮಾನಿಸಲಾಯಿತು. ಗೌರವ ಕಾರ್ಯದರ್ಶಿ ಬ್ರಹ್ಮದೇವ, ಕೆಸಿಎ ಬ್ಯಾಂಕ್ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ, ಮುಖಂಡರಾದ ಸಂತೋಷ್ ಹಿನಾರಿ, ಭಾಸ್ಕರ ಗೌಡ, ಗೋಪಾಲ ಶೆಟ್ಟಿ, ಕೆ.ಎ.ಶ್ರೇಣಿಕ್, ಕವೀಶ್, ಎಚ್.ಸಿ.ಅಣ್ಣಯ್ಯ ಇತರರು ಇದ್ದರು.

ವಿಜೃಂಭಣೆಯ ಮೆರವಣಿಗೆ

ಕಳಸದ ಅರಮನೆಮಕ್ಕಿಯ ದಕ್ಷಿಣ ಕಾಶಿ ಸಭಾಂಗಣದಲ್ಲಿ ಪ್ರತಿಷ್ಠಾಪಿಸಿದ್ದ ಸೌಹಾರ್ದ ಗಣಪತಿಯನ್ನು ಮಂಗಳವಾರ ವಿಜೃಂಭಣೆಯಿಂದ ವಿಸರ್ಜಿಸಲಾಯಿತು. ಸಂಜೆ ವಿಶೇಷ ಪೂಜೆ ಸಲ್ಲಿಸಿ ಗಣಪತಿ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿದ ವಾಹನದಲ್ಲಿ ಪ್ರತಿಷ್ಠಾಪಿಸಿ ಅರಮನೆಮಕ್ಕಿಯಿಂದ ಭವ್ಯ ಮೆರವಣಿಗೆ ನಡೆಸಲಾಯಿತು. ಮಹಾವೀರ ರಸ್ತೆ, ಕೆ.ಎಂ.ರಸ್ತೆ, ಮುಖ್ಯ ರಸ್ತೆ ಹಾಗೂ ಹೊರನಾಡು ರಸ್ತೆ ಮೂಲಕ ಸಾಗಿ ಕೋಟಿತೀರ್ಥದ ಭದ್ರಾನದಿಯಲ್ಲಿ ವಿಜರ್ಸಿಸಲಾಯಿತು. ಮೆರವಣಿಗೆಯಲ್ಲಿ ವಾದ್ಯಗೋಷ್ಠಿ, ಚಂಡೆ ಹಾಗೂ ನಾಸಿಕ್ ಡೋಲ್, ತುಳುನಾಡಿನ ಸಾಂಪ್ರದಾಯಿಕ ಹುಲಿವೇಷ, ಕರಡಿ, ಚೀಂಪಾಜಿ ಸೇರಿದಂತೆ ವಿವಿಧ ಬೃಹತ್ ಗಾತ್ರದ ದೈತ್ಯ ಬೊಂಬೆಗಳು, ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಮೆರವಣಿಗೆ ವೈಭವ ಕಣ್ತುಂಬಿಕೊಂಡರು. ಹಲವೆಡೆ ಮನೆಗಳ ಮುಂದೆ ಗಣಪತಿಗೆ ಹಣ್ಣುಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು.