ಮೂಡಿಗೆರೆ: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಮುಸ್ಲಿಮರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಯೋಜನಾ ಬದ್ಧವಾಗಿ ಅರ್ಜಿ ನಮೂನೆ 7ರಲ್ಲಿ ಆಕ್ಷೇಪಗಳನ್ನು ಸಲ್ಲಿಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ವಿವಿಧ ಪಕ್ಷಗಳ ನಾಯಕರು ಹಾಗೂ ಮುಸ್ಲಿಂ ಮುಖಂಡರು ಸೋಮವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಮೂಡಿಗೆರೆ ಪಟ್ಟಣದ 3 ಮತಗಟ್ಟೆಯಲ್ಲಿ 83, ಬಣಕಲ್, ಕೂಡಹಳ್ಳಿ ಮತಗಟ್ಟೆಯ 52, ಬಿಳಗುಳ 4 ಮತಗಟ್ಟೆ 30, ಬಗ್ಗಸಗೋಡು ಮತಗಟ್ಟೆ 28, ಬಿದರಹಳ್ಳಿ 8, ಹೊರಟ್ಟಿ 7, ಹ್ಯಾಂಡ್‌ಪೋಸ್ಟ್ 12 ಸೇರಿದಂತೆ ತಾಲೂಕಿನ ವಿವಿಧ ಮತಗಟ್ಟೆಗಳಲ್ಲಿ 600ಕ್ಕೂ ಹೆಚ್ಚು ಮುಸ್ಲಿಮರ ಮತಗಳನ್ನು ಪಟ್ಟಿಯಿಂದ ತೆಗೆದು ಹಾಕುವಂತೆ ಕೆಲವರು ಫಾರ್ಮ್ ನಂ.7ರಲ್ಲಿ ಅರ್ಜಿಸಲ್ಲಿಸಿದ್ದಾರೆ. ಸಲ್ಲಿಕೆಯಾಗಿರುವ 600ಕ್ಕೂ ಹೆಚ್ಚು ಅರ್ಜಿಗಳು ಸುಳ್ಳು ಮಾಹಿತಿ ನೀಡಿ ಮುಸ್ಲಿಮರ ವಿರುದ್ಧ ಸಲ್ಲಿಸಲಾಗಿದೆ ಎಂದು ದೂರಿದರು.
ಗೋಣಿಬೀಡು ಮತ್ತು ಬಾಳೂರು ಹೋಬಳಿಗಳಲ್ಲಿಯೂ ಇಂತಹ ಸುಳ್ಳು ಅರ್ಜಿ ಸಲ್ಲಿಕೆಯಾಗಿದೆ. ಗೋಣಿಬೀಡು ಮತ್ತು ಬಾಳೂರು ಹೋಬಳಿಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಅಧಿಕಾರಿಗಳು ಮುಚ್ಚಿಟ್ಟಿದ್ದಾರೆ. ಈ ಎಲ್ಲ ಅರ್ಜಿಗಳಲ್ಲಿ ನಮೂದಿಸಿರುವ ಮುಸ್ಲಿಂ ಮತದಾರರು ಆಯಾ ಗ್ರಾಮಗಳಲ್ಲಿ ಈಗಲೂ ವಾಸವಾಗಿದ್ದಾರೆ. ಸುಳ್ಳು ಅರ್ಜಿಸಲ್ಲಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಲ್ಲಿಕೆಯಾಗಿರುವ ನಕಲಿ ಅರ್ಜಿಯ ಸಾಧಕ ಬಾಧಕ ಪರಿಶೀಲಿಸದೆ ಮತ ಪಟ್ಟಿಯಿಂದ ಹೆಸರನ್ನು ಕೈ ಬಿಡಬಾರದು. ಬಿಎಲ್ಒಗಳು ಮತ್ತೊಮ್ಮೆ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮತದಾರರ ಪಟ್ಟಿಯಿಂದ ಮುಸ್ಲಿಮರ ಹೆಸರನ್ನು ಕೈಬಿಟ್ಟರೆ ಹಾಗೂ ಸುಳ್ಳು ಅರ್ಜಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ತಾಲೂಕು ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.
ಮೂಡಿಗೆರೆ ತಾಲೂಕಿನಲ್ಲಿ ಅರ್ಜಿ ನಮೂನೆ 7ರಲ್ಲಿ 600ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ. ಮತದಾರರ ನೋಂದಣಾಧಿಕಾರಿ ಬಿ.ಸಿ.ಕಲ್ಮುರುಡಪ್ಪ ಅವರು ನಮೂನೆ 7ರಲ್ಲಿ ಸುಳ್ಳು ಅರ್ಜಿ ನೀಡಿದವರ ಪರವಾಗಿದ್ದಾರೆ. 176 ಅರ್ಜಿ ಮಾತ್ರ ಸಲ್ಲಿಕೆಯಾಗಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಮತದಾರರ ನೋಂದಣಾಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು. ಮುಸ್ಲಿಮರು ಗ್ರಾಮದಲ್ಲಿ ವಾಸವಿದ್ದರೂ ಕೂಡ ಅವರ ಮತವನ್ನು ಪಟ್ಟಿಯಿಂದ ಅಳಿಸಿ ಹಾಕಲು ಅರ್ಜಿ ನೀಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಬಾಪುನಗರದ ನಿವಾಸಿ ಆಸಿಫ್ ಒತ್ತಾಯಿಸಿದರು.
ನಮೂನೆ 7ರಲ್ಲಿ 176 ಅರ್ಜಿಗಳು ಬಂದಿದೆ. ಸುಳ್ಳು ಅರ್ಜಿ ಸಲ್ಲಿಕೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಹಸೀಲ್ದಾರ್ ಎಸ್.ಅಶ್ವಿನಿ ಹೇಳಿದರು. ಈ ತಿಂಗಳ 23ರವರೆಗೆ ಮಾತ್ರ ಫಾರ್ಮ್ 7ರಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಕರಡು ಪಟ್ಟಿಯಲ್ಲಿ ಬಂದಿರುವ ಹೆಸರನ್ನು ಕೈ ಬಿಟ್ಟಿಲ್ಲ. ನಮೂನೆ 7ರಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಅದು ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಸೇರುತ್ತದೆ. ಅಲ್ಲಿಂದ ಅವರು ಇಲ್ಲಿಗೆ ಕಳಿಸಿದ ಬಳಿಕ ಪರಿಶೀಲನೆ ನಡೆಸಲಾಗುವುದು. ನಮೂನೆ 7ರಲ್ಲಿ ಅರ್ಜಿ ಸಲ್ಲಿಸಿದವರು ಅದೇ ಮತಗಟ್ಟೆ ಮತದಾರರಾಗಿರಬೇಕು. ಅವರ ಎಪಿಕ್ ನಂಬರ್ ಮತ್ತು ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು. ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಅರ್ಜಿದಾರರ ಪೂರ್ಣ ಮಾಹಿತಿ ಇದೆಯೇ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಅರ್ಜಿ ಕೊಟ್ಟ ತಕ್ಷಣ ಪಟ್ಟಿಯಿಂದ ಡಿಲಿಟ್ ಮಾಡುವುದಿಲ್ಲ. ಬಿಎಲ್ಒಗಳು ಜಾಗೃತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮತದಾರರ ನೋಂದಣಾಧಿಕಾರಿ ಬಿ.ಸಿ.ಕಲ್ಮುರುಡಪ್ಪ ಕರ್ತವ್ಯ ಲೋಪ ಎಸಗಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.