ಚಿಕ್ಕಮಗಳೂರು ತಾಲೂಕಿನ ಕಳಸಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ, ಕ್ರೀಡಾ, ಸಾಂಸ್ಕೃತಿಕ ಸಂಘಗಳು, ಇಎಲ್ ಹಾಗೂ ಇಕೋ ಕ್ಲಬ್‌ಗಳ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. 
ಚಿಕ್ಕಮಗಳೂರು

ವಿದ್ಯಾರ್ಥಿಗಳು ಸಮಾಜಮುಖಿತ್ವ ಕಲಿಯಬೇಕು

ನಿತ್ಯಾನಂದ ಎಸ್.ಎನ್.
ಚಿಕ್ಕಮಗಳೂರು: ವಿದ್ಯಾರ್ಥಿ ಜೀವನ ಚಿನ್ನದ ಜೀವನ ಆಗುವುದು ಇಲ್ಲಿ ಬರುವ ಅವಕಾಶಗಳನ್ನು ಬಳಸಿಕೊಂಡಾಗ. ಅಂಕಗಳನ್ನು ಗಳಿಸುವುದರ ಜೊತೆ ವಿದ್ಯಾರ್ಥಿ ಜೀವನದಲ್ಲಿಯೇ ಸಮಾಜಮುಖಿ ಚಿಂತನೆಗಳನ್ನು ರೂಪಿಸಿಕೊಳ್ಳಬೇಕು ಎಂದು ಚಿಕ್ಕಮಗಳೂರು ಟೈಲರ್ ಅಸೋಷಿಯೇಷನ್ ಸೊಸೈಟಿ ಅಧ್ಯಕ್ಷ, ಶಿಕ್ಷಣ ಪ್ರೇಮಿ ಅಶೋಕ ಶೆಟ್ಟಿ ತಿಳಿಸಿದರು.
ತಾಲೂಕಿನ ಕಳಸಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ, ಕ್ರೀಡಾ, ಸಾಂಸ್ಕೃತಿಕ ಸಂಘಗಳು, ಇಎಲ್ ಹಾಗೂ ಇಕೋ ಕ್ಲಬ್‌ಗಳನ್ನು ಉದ್ಘಾಟಿಸಿ ಮಾತನಾಡಿದರು.
ಸ್ಥಾನ, ಮನ್ನಣೆ, ಹಣದ ದಾಹ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಶಿಕ್ಷಣದ ಮೂಲಕ ಮಾತ್ರ ಮಾನವೀಯ ಮೌಲ್ಯಗಳನ್ನು ಕಲಿಯಲು ಸಾಧ್ಯ. ಬಡತನ, ಸಿರಿತನ ಯಾವುದೂ ಜ್ಞಾನಕ್ಕೆ ಸಮನಾದುದಲ್ಲ. ಲಕ್ಷ್ಮೀ ಎಂದೂ ಸರಸ್ವತಿಯನ್ನು ಗೌರವಿಸುತ್ತಾಳೆ ಎನ್ನುವಂತೆ ವಿದ್ವಾಂಸರಿಗೆ ಸರ್ವತ್ರ ಮಾನ್ಯತೆ ಇದೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ ಪಡೆದ, ಕೆಪಿಎಸ್ ಪ್ರ‍್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಭಾಗ್ಯ ಮಾತನಾಡಿ, ವೈಯಕ್ತಿಕವಾಗಿ ನಾನು ಕ್ರೀಡಾ ಪ್ರೇಮಿ, ಕ್ರೀಡಾಳು. ಕ್ರೀಡಾ ಜೀವನ ನಮ್ಮ ಲವಲವಿಕೆಯನ್ನು ಕಾಪಾಡುತ್ತದೆ. ನಮ್ಮಲ್ಲಿ ಆಸಕ್ತಿ ಇದ್ದಾಗ ಸಮಾಜ ಮತ್ತು ವ್ಯವಸ್ಥೆ ನಮಗೆ ನೆರವು ನೀಡುತ್ತದೆ ಎಂದರು.
ಆಟೋಟಗಳು ಉತ್ತಮ ವ್ಯಾಯಾಮವನ್ನು ನೀಡಿ ನಮ್ಮ ದೇಹಾರೋಗ್ಯ ನೋಡಿಕೊಳ್ಳುತ್ತದೆ. ಕ್ರೀಡಾ ಮನೋಭಾವ ಎಲ್ಲ ಕ್ಷೇತ್ರಗಳಿಗೂ ಅಗತ್ಯ ಎನ್ನುತ್ತಾರೆ. ಹಾಗೆಂದ ಮೇಲೆ ಸೋಲು ಗೆಲುವನ್ನು ಒಂದೇ ರೀತಿ ಸ್ವೀಕರಿಸುವ ಸಮಚಿತ್ತ ಕ್ರೀಡಾಳುಗಳಲ್ಲಿರುತ್ತದೆ. ಇಂದು ಕಾಲೇಜು ವಿಭಾಗದವರು ನನ್ನನ್ನು ಗೌರವಿಸಿದ್ದು ತವರು ಮನೆಯವರು ಕರೆದು ಗೌರವಿಸಿದಂತಾಯಿತು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ನಾಗರಾಜರಾವ್ ಎಚ್.ಎಂ. ಮಾತನಾಡಿ, ಸೂಕ್ಷ್ಮ ಸಂಗತಿಗಳಿಗೂ ಮನಸ್ಸು ಹರಿಸಿ ಏಕಾಗ್ರತೆಯಿಂದ ಸ್ಪಂದಿಸಿದರೆ ಮಹತ್ತು ನಮ್ಮದಾಗುತ್ತದೆ. ಹಾಗೇ ಪ್ರತಿ ಕಿರುಪರೀಕ್ಷೆಗಳಿಗೂ ಶಿರಬಾಗಿ ಓದಿದರೆ, ಮಹಾಪರೀಕ್ಷೆಯ ಫಲಿತಾಂಶ ನಮ್ಮ ತಲೆ ಎತ್ತುವಂತೆ ಮಾಡುತ್ತದೆ ಎಂದರು.
ಉಪನ್ಯಾಸಕರಾದ ಶಾಂತಕುಮಾರ್ ಹೆಚ್.ಜಿ., ಸುಕನ್ಯ ಜಿ.ಬಿ. ಮಾತನಾಡಿದರು. ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಹಮ್ಮದ್ ಅಲ್ಫಾಜ್, ಚರಣ್ ಕುಮಾರ್, ಭವಾನಿ, ಭಾಗ್ಯಲಕ್ಷ್ಮೀ ಅವರನ್ನು ಕಾಲೇಜು ವತಿಯಿಂದ ಅಭಿನಂದಿಸಲಾಯಿತು. ರಾಜೇಶ್ ವಿ.ಕೆ., ಕಾವ್ಯ ಶಾಂತಕುಮಾರ್, ಗೀತಾ ದೀಪಕ್, ಸರಿತಾ ವಿ.ಜೆ., ಭೂಮಿಕಾ, ಚೇತನ್, ಸುಗಂಧಕುಮಾರ್, ಪೋಷಕರು ಉಪಸ್ಥಿತರಿದ್ದರು. ರೋಹಿಣಿ, ನಯನ, ಮಧುರ, ಭುವನ್ ಡಿ.ಪಿ., ಚಂದನ್ ಹಾಗೂ ವೇದ ಕಾರ್ಯಕ್ರಮವನ್ನು ನಿರ್ವಹಿಸಿದರು.