ಎನ್.ಆರ್.ಪುರದ ಮೌಂಟ್‌ಕಾರ್ಮಲ್ ಕಾಲೇಜಿನಲ್ಲಿ ಪರಿಸರ, ಸಾಹಿತ್ಯ ಮತ್ತು ಸಾಮಾಜಿಕ ಕ್ಲಬ್‌ಗಳನ್ನು ಮೇರಿ ಉದ್ಘಾಟಿಸಿದರು.  
ಚಿಕ್ಕಮಗಳೂರು

ವಿದ್ಯಾರ್ಥಿಗಳೇ, ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಿ

ಎನ್.ಆರ್.ಪುರ: ವಿದ್ಯಾರ್ಥಿಗಳು ಜೀವನದ ಪ್ರತಿ ಕ್ಷಣವನ್ನೂ ಆನಂದಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮೇರಿ ಹೇಳಿದರು.
ಮೆಣಸೂರಿನ ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪರಿಸರ, ಸಾಹಿತ್ಯ ಮತ್ತು ಸಾಮಾಜಿಕ ಕ್ಲಬ್‌ಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಂಸ್ಕೃತಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಸಿಗುವ ಸಂತೋಷ ಮೊಬೈಲ್ ನೋಡುವುದರಿಂದ ಸಿಗುವುದಿಲ್ಲ. ಶಿಕ್ಷಣದ ಮೂಲ ಉದ್ದೇಶ ಪಠ್ಯದ ಜತೆಗೆ ಪಠ್ಯಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದಾಗಿದೆ. ಪ್ರತಿಯೊಂದು ಕ್ಷಣ ಯಾರನ್ನು ಭೇಟಿ ಮಾಡಿದರೂ ಸಹ ಅವರಿಂದಲೂ ಕಲಿಯುವುದು ಇರುತ್ತದೆ. ಪ್ರತಿಯೊಂದು ಕ್ಷಣವನ್ನು ಆನಂದಿಸುವುದು ಕಲಿಕೆಯ ಭಾಗವಾಗಿದೆ ಎಂದರು.
ವಿದ್ಯಾರ್ಥಿಗಳು ಬೇರೆ, ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಪಾಠದೊಂದಿಗೆ ಜೀವನ ಕೌಶಲ, ಬದುಕಲು ಬೇಕಾದ ಕಲೆ ಕಲಿತುಕೊಳ್ಳಬೇಕು. ಪಾಲಕರು, ಶಿಕ್ಷಕರು, ಸಮಾಜ ಬದುಕುವ ಕಲೆ ಕಲಿಸುತ್ತದೆ. ಮೊಬೈಲ್ ನೋಡುವುದಕ್ಕಿಂತಲೂ ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿ ಜತೆಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ವೇದಿಕೆ ಬಳಸಲಿಕೊಳ್ಳಲು ವಿವಿಧ ಕ್ಲಬ್‌ಗಳು ಪೂರಕವಾಗಲಿದೆ ಎಂದರು.
ಕಾರ್ಮಲ್ ವಿದ್ಯಾ ಸಂಸ್ಥೆಯ ಸ್ಥಳೀಯ ವ್ಯವಸ್ಥಾಪಕಿ ಸಿಸ್ಟರ್ ಜೋಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಹೊರಹೊಮ್ಮಿಸಲು ವಿವಿಧ ಕ್ಲಬ್‌ಗಳಲ್ಲಿ ಆಯೋಜಿಸುವ ಕಾರ್ಯಕ್ರಮಗಳು ಸಹಾಯಕವಾಗಲಿದೆ ಎಂದರು.
ಪ್ರಾಚಾರ್ಯೆ ಸಿಸ್ಟರ್ ಶುಭಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಲು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಪ್ರೋತ್ಸಾಹ ನೀಡಲು ಕ್ಲಬ್‌ಗಳನ್ನು ಸ್ಥಾಪಿಸಲಾಗಿದೆ ಎಂದರು.
ಉಪನ್ಯಾಸಕರಾದ ಐ.ಎಂ.ರಾಜೀವ, ಟಿ.ಮಂಜುನಾಥ್, ಸ್ವಪ್ನ ಹೆಗ್ಡೆ, ನಂದಿನಿ ಆಲಂದೂರು, ಫ್ರಿಜೀನಾ, ಅನುಪಮಾ, ವಿದ್ಯಾರ್ಥಿಗಳಾದ ಪ್ರಥಮ್, ಆದರ್ಶ,ಕಾವ್ಯಶ್ರೀ ಲಚಿತಾ ಇದ್ದರು.