ಬಾಳೆಹೊನ್ನೂರಿನ ಮಾಗುಂಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಇನ್ನರ್‌ವ್ಹೀಲ್ ಕ್ಲಬ್‌ನಿಂದ ನೋಟ್‌ಬುಕ್, ಪೆನ್ನು ವಿತರಿಸಲಾಯಿತು.
ಬಾಳೆಹೊನ್ನೂರು: ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಸಾಧನೆ ಮಾಡಬೇಕು ಎಂದು ಎಂಎಸ್ಸಿ ವಿದ್ಯಾರ್ಥಿನಿ ಕೆ.ಆರ್.ಯುಕ್ತಮುಖಿ ಹೇಳಿದರು.
ಮಾಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇನ್ನರ್‌ವ್ಹೀಲ್ ಕ್ಲಬ್‌ನಿಂದ ಆಯೋಜಿಸಿದ್ದ ಪರೀಕ್ಷಾ ಒತ್ತಡ ನಿರ್ವಹಣೆ ಕುರಿತು ತರಬೇತಿ ಶಿಬಿರದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯ ಸಂದರ್ಭದಲ್ಲಿ ಮಾತ್ರ ಅಧ್ಯಯನ ಶೀಲರಾಗದೆ, ನಿರಂತರವಾಗಿ ಅಧ್ಯಯನ ಮಾಡಿ ಸಾಧನೆ ಮಾಡಬೇಕು. ಪರೀಕ್ಷೆ ಸಂದರ್ಭದಲ್ಲಿ ಯಾವುದೇ ಒತ್ತಡಗಳಿಗೆ ಒಳಗಾಗದೆ ಶಾಂತ ಚಿತ್ತತೆಯಿಂದ ಪರೀಕ್ಷೆಗಳನ್ನು ಎದುರಿಸಿ ಪಾಲಕರು, ಶಾಲೆಗೆ ಕೀರ್ತಿ ತರಬೇಕು ಎಂದರು.
ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಕಾಂಚನಾ ಸುಧಾಕರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಶಿಕ್ಷಣವೇ ಅಡಿಪಾಯ. ಶಿಕ್ಷಣವಿಲ್ಲದ ಬದುಕು ಇಂದು ನಿರರ್ಥಕ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸದಾ ಓದಿನ ಬಗ್ಗೆ ಗಮನಹರಿಸಿ ಉತ್ತಮ ಸಾಧನೆ ಮಾಡಬೇಕು. ಪರೀಕ್ಷೆಗಳ ಬಗ್ಗೆ ಯಾವುದೇ ಆತಂಕ, ಗೊಂದಲಗಳಿಗೆ ಒಳಗಾಗದೆ ಶಿಕ್ಷಕರು ನೀಡುವ ಮಾರ್ಗದರ್ಶನವನ್ನು ಪಡೆದು ಪರೀಕ್ಷೆಗಳನ್ನು ಎದುರಿಸಿ ಉತ್ತಮ ಅಂಕ ಪಡೆದು ಶಿಕ್ಷಕರು, ಪಾಲಕರ ಪ್ರೋತ್ಸಾಹಕ್ಕೆ ಗೌರವ ನೀಡಬೇಕಿದೆ.
ಇನ್ನರ್‌ವ್ಹೀಲ್ ಕ್ಲಬ್‌ನಿಂದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ನೋಟ್‌ಬುಕ್, ಪೆನ್ನುಗಳನ್ನು ವಿತರಿಸಲಾಯಿತು. ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ರಮೇಶ್ ನಾಯಕ್, ಕಾರ್ಯದರ್ಶಿ ನಂದಿನಿ ರಾಜೇಶ್, ಪಲ್ಲವಿ, ಪ್ರೀತಾ, ಸುಪ್ರಿಯಾ, ಶೈಲಾ, ವಿದ್ಯಾಶೆಟ್ಟಿ, ರೋಟರಿ ಕ್ಲಬ್ ಸದಸ್ಯರಾದ ಎಂ.ಆರ್.ರವಿ, ಕೆ.ಕೆ.ರಮೇಶ್ ಮತ್ತಿತರರು ಹಾಜರಿದ್ದರು.