ಪಂಚನಹಳ್ಳಿಯಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟವನ್ನು ಪಿ.ಸಿ.ಪ್ರಸನ್ನ ಉದ್ಘಾಟಿಸಿದರು.
ಕಡೂರು: ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಇಂದಿರಾ ಕ್ಯಾಂಟೀನ್ ಮೇಲುಸ್ತುವಾರಿ ಮತ್ತು ಗುಣಮಟ್ಟ ಪರಿಶೀಲನಾ ಸಮಿತಿ ರಾಜಾಧ್ಯಕ್ಷ ಪಿ.ಸಿ.ಪ್ರಸನ್ನ ಹೇಳಿದರು.
ಪಂಚನಹಳ್ಳಿಯಲ್ಲಿ ಸ್ನೇಹ ಶಾಲೆ ಸಹಯೋಗದಲ್ಲಿ ನಡೆದ ಪಂಚನಹಳ್ಳಿ ಹಾಗೂ ಸಿಂಗಟಗೆರೆ ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರೀಡೆಗೆ ಹೆಚ್ಚು ಮಹತ್ವ ನೀಡುತ್ತಿವೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳಬೇಕು. ಕ್ರೀಡಾಪಟುಗಳು ಸೋಲು ಗೆಲುವಿನ ನಂತರ ವೈಮನಸ್ಸು ಬೆಳೆಸಿಕೊಳ್ಳಬಾರದು ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಜಿ.ಎಸ್.ಆಂಜನೇಯ ಮಾತನಾಡಿ, ತೀರ್ಪುಗಾರರು ನ್ಯಾಯ ಸಮ್ಮತ ತೀರ್ಪು ನೀಡಬೇಕು. ಮೇಲ್ವಿಚಾರಕರು ತಂಡವನ್ನು ಮುನ್ನಡೆಸಬೇಕು. ಯಾವುದೇ ಗೊಂದಲವಾದಲ್ಲಿ ಮೇಲುಸ್ತುವಾರಿ ಸಮಿತಿ ಗಮನಕ್ಕೆ ತಂದರೆ ಅವರು ಬಗೆ ಹರಿಸುತ್ತಾರೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಕೊಳ್ಳಬೇಕು ಎಂದರು.
ಸ್ನೇಹ ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಸಿ.ಕೆ.ಓ.ರಾಘವೇಂದ್ರ ಮಾತನಾಡಿ, ಕ್ರೀಡೆಯಿಂದ ಶಿಸ್ತು ಮತ್ತು ಸಮಯ ಪಾಲನೆ ಕಲಿಯಬಹುದು. ಯಾವ ಶಾಲೆಯಲ್ಲಿ ಉತ್ತಮ ದೈಹಿಕ ಶಿಕ್ಷಕರಿರುತ್ತಾರೆ, ಆ ಶಾಲೆ ಮಕ್ಕಳಲ್ಲಿ ನಾವು ಹೆಚ್ಚಿನ ಶಿಸ್ತು ಕಾಣಬಹುದು. ಉತ್ತಮ ಭವಿಷ್ಯ ರೂಢಿಸಿಕೊಳ್ಳಲು ಪಠ್ಯದ ಜತೆಗೆ ದೈಹಿಕ ಶಿಕ್ಷಣವೂ ಸಹಕಾರಿ. ತೀರ್ಪುಗಾರರು ದೈವತ್ವದ ತೀರ್ಪು ನೀಡಿದರೆ ಯಾವುದೇ ಗೊಂದಲವಾಗುವುದಿಲ್ಲ ಎಂದರು.
ಪಂಚನಹಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಆರ್.ಬಿ.ಗಂಗಾಧರಯ್ಯ, ತಾಲೂಕು ಯುವಜನ ಮತ್ತು ಕ್ರೀಡಾಕಾರಿ ಮುರಳೀಧರ, ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷೆ ಜಿ.ರಾಜೇಶ್ವರಿ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷೆ ಲತಾಮಣಿ, ಕಾರ್ಯದರ್ಶಿ ಚಂದ್ರಶೇಖರ್, ಸಿಆರ್‌ಪಿಗಳಾದ ಸಿ.ಪಿ.ಪ್ರಿಯಾ, ಆರ್.ಗಂಗಾಧರ್ ಮತ್ತಿತರರು ಇದ್ದರು.