ಎನ್.ಆರ್.ಪುರ ಕೆಪಿಎಸ್ ಪ್ರೌಢ ಶಾಲಾ ವಿಭಾಗದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ್‌ಶೆಟ್ಟಿ ವಿದ್ಯಾರ್ಥಿಮಿತ್ರ ಪತ್ರಿಕೆ ಬಿಡುಗಡೆಗೊಳಿಸಿದರು.  
ಚಿಕ್ಕಮಗಳೂರು

ಮಕ್ಕಳ ಕಲಿಕೆಗೆ ವಿದ್ಯಾರ್ಥಿ ಮಿತ್ರ ಪೂಕರ

ಜಿ.ಹೆಚ್. ಧನ್ಯಕುಮಾರ್
ಎನ್.ಆರ್.ಪುರ: ಉದ್ಯಮಿ ವಿಜಯ್‌ಸಂಕೇಶ್ವರ್ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದು, ಅವರ ಪರಿಶ್ರಮವೇ ಅವರ ಜೀವನದ ಯಶಸ್ಸಿಗೆ ಕಾರಣವಾಗಿದೆ ಎಂದು ಕೆಪಿಎಸ್ ಸ್ಕೂಲ್‌ನ ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ್‌ಶೆಟ್ಟಿ ಹೇಳಿದರು.
ಪಟ್ಟಣದ ಕೆಪಿಎಸ್ ಸ್ಕೂಲ್‌ನ ಪ್ರೌಢ ಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ಮಿತ್ರ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕೇವಲ ಒಂದು ವಾಹನದಿಂದ ಪ್ರಾರಂಭಿಸಿದ ಲಾಜಿಸ್ಟಿಕ್ ಸಂಸ್ಥೆ ಇಂದು ಸಾವಿರಾರು ವಾಹನಗಳನ್ನು ಹೊಂದಿದೆ. ಪತ್ರಿಕೋದ್ಯಮದಲ್ಲೂ ತಮ್ಮದೇ ಆದ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ಪಠ್ಯಕ್ಕೆ ಪೂರಕವಾದ ವಿದ್ಯಾರ್ಥಿಮಿತ್ರ ಪತ್ರಿಕೆ ರೂಪಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಅವರ ಪರಿಶ್ರಮವನ್ನು ಮಾರ್ಗದರ್ಶನವಾಗಿ ಪಡೆದು ಜೀವನದಲ್ಲಿ ಯಶಸ್ಸು ಸಾಧಿಸಬೇಕು. ವಿದ್ಯಾರ್ಥಿಮಿತ್ರ ಪತ್ರಿಕೆಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿಕ್ಷಕ ರಾಮಪ್ಪ ಚಲವಾದಿ ಮಾತನಾಡಿ, ವಿಜಯ್‌ಸಂಕೇಶ್ವರ ಅವರು ಮಕ್ಕಳಿಗೆ ಉಚಿತವಾಗಿ ಪಠ್ಯಕ್ಕೆ ಪೂರಕ, ಅಂಕಗಳಿಕೆಗೆ, ಕಲಿಕೆಗೆ ಸಹಾಯವಾಗುವಂತೆ ಪತ್ರಿಕೆಯನ್ನು ಹೊರ ತರುತ್ತಿರುವುದು ಶ್ಲಾಘನೀಯವಾಗಿದೆ. ಮಕ್ಕಳು ಈ ಪತ್ರಿಕೆಯನ್ನು ಪ್ರತಿ ನಿತ್ಯ ಓದಬೇಕು. ಅಲ್ಲದೆ ಕನ್ನಡ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಉದಯಗಿಲ್ಲಿ, ಕೆ.ಎ.ಅಬೂಬಕರ್, ಎಂ.ಸಿ.ಗುರುಶಾಂತಪ್ಪ, ಶಿಕ್ಷಕಿಯರಾದ ಲತಾ, ಸೌಮ್ಯ ಇದ್ದರು.