ಚಿಕ್ಕಮಗಳೂರು ಜಿಪಂ ಮಿನಿ ಸಭಾಂಗಣದಲ್ಲಿ ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ನಡೆಯಿತು 
ಚಿಕ್ಕಮಗಳೂರು

ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಬಸ್‌ಗಳ ಸಂಚಾರ ವ್ಯವಸ್ಥೆಗೆ ಕ್ರಮ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ
ಚಿಕ್ಕಮಗಳೂರು: ದೈನಂದಿನ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಬಸ್‌ಗಳು ಸಂಚರಿಸಲು ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದರು.
ನಗರದ ಜಿ.ಪಂ. ಮಿನಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾವಾರು ಕೆ.ಎಸ್.ಆರ್.ಟಿ.ಸಿ. ಬಸ್‌ಗಳಲ್ಲಿ ಈವರೆಗೆ ೬.೭೫ ಕೋಟಿ ಟ್ರಿಪ್‌ಗಳಲ್ಲಿ ಮಹಿಳೆಯರು ಸಂಚರಿಸಿದ್ದು ಇದಕ್ಕೆ ಸರ್ಕಾರ ೨೫೮ ಕೋಟಿ ರೂ.ಗಳನ್ನು ನಿಗಮಕ್ಕೆ ಭರಿಸಿದೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ೭೭೨೮ ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಜನ್ಮಡಾಟ್‌ಕಾಂನಲ್ಲಿ ಮಾಹಿತಿ ದೊರೆತಿದೆ. ಆದರೆ ಈವರೆಗೆ ೩೭೧೨ ಮಂದಿಯ ಮಾಹಿತಿ ಮಾತ್ರ ಲಭ್ಯವಾಗಿದ್ದು ಉಳಿದವರ ಮಾಹಿತಿ ಸಂಗ್ರಹಿಸುವ ಜೊತೆಗೆ ಸಂದಾಯವಾಗಿರುವ ಹಣವನ್ನು ಸರ್ಕಾರಕ್ಕೆ ವಾಪಸ್ ಪಡೆಯಲು ಕ್ರಮ ವಹಿಸಬೇಕಲ್ಲದೆ, ಮುಂದೆ ಅವರ ಖಾತೆಗೆ ಹಣ ಸಂದಾಯವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ. ಪರಿಷ್ಕರಣೆ ಹೆಸರಿನಲ್ಲಿ ಅರ್ಹರಿಗೆ ಅನ್ಯಾಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಮರಣ ಹೊಂದಿರುವವರ ಹೆಸರಿನಲ್ಲಿ ಈ ಯೋಜನೆಯಡಿ ಸವಲತ್ತು ಪಡೆದಿರುವ ಫಲಾನುಭವಿಗಳನ್ನು ಗುರುತಿಸಿ ಕೈಬಿಡಲಾಗುವುದು. ಈ ಸಂಬಂಧ ಜಿಲ್ಲಾ ಗ್ಯಾರಂಟಿ ಸಮಿತಿಯು ಕೂಡ ಅರ್ಹರು ಸೌಲಭ್ಯದಿಂದ ವಂಚಿತರಾಗದಂತೆ ಗಮನಹರಿಸಲಾಗುವುದು ಎಂದು ತಿಳಿಸಿದರು.
ಇದುವರೆಗೆ ಜಿಲ್ಲೆಯ ೩.೨೪ ಲಕ್ಷ ಆರ್‌ಆರ್ ಸಂಖ್ಯೆ ಪೈಕಿ ಸುಮಾರು ೧೦ ಲಕ್ಷ ಮಂದಿಗೆ ಉಚಿತ ವಿದ್ಯುತ್ ಒದಗಿಸುತ್ತಿದ್ದು ಇದಕ್ಕೆ ಸರ್ಕಾರ ೩೬೫ ಕೋಟಿ ರೂ. ಮೆಸ್ಕಾಂಗೆ ಭರಿಸಿದೆ. ಒಟ್ಟಾರೆ ಜಿಲ್ಲೆಯ ೧೦ ಲಕ್ಷ ಜನರಿಗೆ ಗ್ಯಾರಂಟಿ ಯೋಜನೆಯಡಿ ೨೦೫೫ ಕೋಟಿ ರೂ.ಗಳ ಆರ್ಥಿಕ ಶಕ್ತಿ ತುಂಬುವ ಮೂಲಕ ಬಹುದೊಡ್ಡ ಸಂಚಲನ ಮೂಡಿಸಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಸಾವಿಗೀಡಾದ ಮಹಿಳೆಯರನ್ನು ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಜೊತೆಗೆ ೩೦ ಕಂತುಗಳ ಮೂಲಕ ಜಿಲ್ಲೆಯ ೨.೭೩ ಲಕ್ಷ ಕುಟುಂಬದ ಯಜಮಾನಿಯರ ಖಾತೆಗೆ ಸರ್ಕಾರ ೧೫೨೭ ಕೋಟಿ ರೂ.ಗಳನ್ನು ಜಮೆ ಮಾಡಿದೆ ಎಂದು ಮಾಹಿತಿ ನೀಡಿದರು.
ಅನ್ನಭಾಗ್ಯ ಯೋಜನೆಯಡಿ ಸರ್ವರ್ ಸಮಸ್ಯೆ ಬಗ್ಗೆ ಗ್ಯಾರಂಟಿ ಸಮಿತಿ ಸದಸ್ಯರು ಪ್ರಸ್ತಾಪಿಸಿದಾಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಯೋಗಾನಂದ್ ಮಾತನಾಡಿ, ಮೇ ಮತ್ತು ಜೂನ್ ತಿಂಗಳ ಪಡಿತರ ಒಟ್ಟಿಗೆ ವಿತರಣೆಯಾಗುತ್ತಿದೆ. ಅಲ್ಲದೇ ಪಡಿತರ ವಿತರಣೆಗೆ ಇಡೀ ದೇಶದಲ್ಲಿ ಒಂದೇ ಸರ್ವರ್ ಬಳಸುತ್ತಿರುವ ಕಾರಣ ತಂತ್ರಾಂಶದ ತೊಂದರೆಯಾಗಿದ್ದು ಮುಂದೆ ಜಿಲ್ಲೆಯಲ್ಲಿ ಈ ಸಮಸ್ಯೆ ಮರುಕಳಿಸದಂತೆ ಕ್ರಮ ವಹಿಸುವುದಾಗಿ ಹೇಳಿದರು.
ಅಂತ್ಯೋದಯ ಮತ್ತು ಇತರೆ ಯೋಜನೆಗಳ ಫಲಾನುಭವಿಗಳ ಬಗ್ಗೆ ಮಾಹಿತಿ ನೀಡಿ, ಜಿಲ್ಲೆಯ ಒಟ್ಟು ೫೩೦ ಪಡಿತರ ಅಂಗಡಿಗಳಲ್ಲಿ ಈ ಬಗ್ಗೆ ವಿವರ ಪ್ರಕಟಿಸಲಾಗಿದೆ. ಈವರೆಗೆ ಜಿಲ್ಲೆಯ ೮.೨೩ ಲಕ್ಷ ಫಲಾನುಭವಿಗಳಿಗೆ ೩೬೯ ಕೋಟಿ ರೂ.ಗಳಷ್ಟು ನಗದು ಮತ್ತು ಅಕ್ಕಿಯನ್ನು ಸರ್ಕಾರ ವಿತರಣೆ ಮಾಡಿದೆ ಎಂದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಸತೀಶ್ ಮಾತನಾಡಿ ಜಿಲ್ಲೆಯಲ್ಲಿ ೧೦ನೇ ತರಗತಿವರೆಗೆ ೯೩,೪೮೯, ಪಿಯುಸಿ ೧೪,೯೦೦, ಪದವಿ, ಸ್ನಾತಕೋತ್ತರ, ಐಟಿಐ, ಡಿಪ್ಲೋಮಾ, ವೈದ್ಯಕೀಯ ಮತ್ತು ಇಂಜಿನಿಯರ್ ಪೈಕಿ ೧೯,೦೦೦ ಸೇರಿದಂತೆ ಒಟ್ಟು ೧.೩೦ ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಪೈಕಿ ೬೭,೭೦೦ ಗಂಡು ಮಕ್ಕಳಿಗೆ ಉಚಿತ ಬಸ್‌ಪಾಸ್ ದೊರೆಯುತ್ತಿದ್ದು ಈ ದಾಖಲಾತಿಗೆ ಒಂದು ತಿಂಗಳ ಕಾಲಾವಕಾಶವಿದೆ ಎಂದರು.
ಉದ್ಯೋಗ ವಿನಿಮಯ ಅಧಿಕಾರಿ ಖಲಂಧರ್ ಮಾತನಾಡಿ, ಜಿಲ್ಲೆಯ ೫೪,೭೦೬ ನಿರುದ್ಯೋಗಿಗಳಿಗೆ ಹಂತ ಹಂತವಾಗಿ ೧೬.೪೧ ಕೋಟಿ ರೂ.ಗಳನ್ನು ಯುವನಿಧಿ ಯೋಜನೆಯಡಿ ಸಹಾಯಧನ ದೊರಕಿಸುವ ಮೂಲಕ ರಾಜ್ಯದಲ್ಲಿ ನಿರುದ್ಯೋಗಿಗಳಿಗೆ ಆಸರೆಯಾಗಿ ಯೋಜನೆ ರೂಪುಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಜಿಲ್ಲಾ ಉಪಾಧ್ಯಕ್ಷರಾದ ಎಸ್.ಎನ್.ಮಂಜುನಾಥ್, ಹೇಮಾವತಿ, ಚಂದ್ರಮೌಳಿ, ಹೆಚ್.ಎಸ್.ಕೃಷ್ಣೇಗೌಡ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ರಾಜಗೋಪಾಲ್, ವಿವಿಧ ತಾಲ್ಲೂಕು ಅಧ್ಯಕ್ಷರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.